ತುಮಕೂರು | ಜಲಶುದ್ಧಿ ಅಭಿಯಾನಕ್ಕೆ 135 ಕೋಟಿ ರೂ. ಅನುದಾನ : ಕೆಯುಐಡಿಎಫ್‌ಸಿ ಎಂ.ಡಿ

ತುಮಕೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಲಶುದ್ಧಿ ಅಭಿಯಾನದಡಿ ಕೊಳಚೆ ನೀರಿನ ಸಂಸ್ಕರಣಾ ವ್ಯವಸ್ಥೆ, ಸ್ವಚ್ಛ ಭಾರತ್ ಮಿಷನ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕಾಗಿ ಒಟ್ಟು 135.23 ಕೋಟಿ ರೂ.ಗಳ ಅನುದಾನಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ರಾಜ್ಯ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ(ಕೆಯುಐಡಿಎಫ್‌ಸಿ)ದ ವ್ಯವಸ್ಥಾಪಕ ನಿರ್ದೇಶಕ ಶರತ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಹುಳಿಯಾರು ಹಾಗೂ ಕೊರಟಗೆರೆ ಪಟ್ಟಣ ಪಂಚಾಯತಿಯಲ್ಲಿ ಕೊಳಚೆ ನೀರಿನ ಸಂಸ್ಕರಣೆ ವ್ಯವಸ್ಥೆಗಾಗಿ ತಲಾ 3.50 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ. ಅದೇ ರೀತಿ ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ತುಮಕೂರು ಮಹಾನಗರಪಾಲಿಕೆ ಹಾಗೂ ಶಿರಾ ನಗರಸಭೆ ಹೊರತುಪಡಿಸಿ ಜಿಲ್ಲೆಯ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ 33.23 ಕೋಟಿ ರೂ. ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕಾರ್ಯಕ್ರಮದ ಅನುಷ್ಟಾನಕ್ಕಾಗಿ ಕುಣಿಗಲ್ ಪುರಸಭೆಗೆ 35 ಕೋಟಿ ರೂ., ತಿಪಟೂರು ನಗರಸಭೆಗೆ 10 ಕೋಟಿ ರೂ. ಮತ್ತು ತುಮಕೂರು ಮಹಾನಗರಪಾಲಿಕೆಗೆ 50 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಜಲಮೂಲಗಳಿಗೆ ವಿಲೇ ಮಾಡಿ ಜಲಮಾಲಿನ್ಯವನ್ನು ತಡೆಗಟ್ಟುವುದು ನಗರ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿರುತ್ತದೆ. ಯಾವುದೇ ರೀತಿಯಲ್ಲಿ ಸಂಸ್ಕರಿಸದ ಮಲದ ಕೆಸರು ಅಥವಾ ಬಳಸಿದ ನೀರನ್ನು ಪರಿಸರಕ್ಕೆ ಬಿಡದೆ ಎಲ್ಲಾ ಬಳಸಿದ ನೀರನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಸಂಸ್ಕರಿಸಿ, ಸಾಗಿಸುವ ಮೂಲಕ ಬಳಸಿದ ನೀರಿನ ನಿರ್ವಹಣೆ ಮಾಡಬೇಕು. ಸಂಸ್ಕರಿಸಿದ ನೀರಿನ ಮರುಬಳಕೆಯೊಂದಿಗೆ ಸಂಸ್ಕರಿಸದ ತ್ಯಾಜ್ಯ/ಬಳಸಿದ ನೀರನ್ನು ಜಲಮೂಲಗಳಿಗೆ ಸೇರದಂತೆ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಕೊಳಚೆ ನೀರು ಉತ್ಪಾದನೆ ಮತ್ತು ಸಂಸ್ಕರಣೆ ನಡುವಿನ ಅಂತರ ಕಡಿಮೆ ಮಾಡಲು ಸರ್ಕಾರವು ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವನ್ನು ಅನುಷ್ಟಾನ ಇಲಾಖೆಯನ್ನಾಗಿ ಗುರುತಿಸಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತವಾಗಿ ಶಿರಾ ನಗರಸಭೆ ಹೊರತುಪಡಿಸಿ ಉಳಿದ 10 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅದೇ ರೀತಿ ಹುಳಿಯಾರು ಮತ್ತು ಕೊರಟಗೆರೆಯಲ್ಲಿ ಮಲ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ತಲಾ 3.5 ಕೋಟಿ ರೂ. ಮಂಜೂರು ಮಾಡಿ ಕಾರ್ಯಾದೇಶ ನೀಡಲಾಗಿದೆ. ಅಧಿಕಾರಿಗಳು ಘಟಕ ನಿರ್ಮಾಣಕ್ಕೆ ಸ್ಥಳ ಗುರುತಿಸಿ ತ್ವರಿತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಕೆಯುಐಡಿಎಫ್‌ಸಿ ಮುಖ್ಯ ಇಂಜಿನಿಯರ್ ನಂದೀಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆಂಜಿನಪ್ಪ, ಪಾಲಿಕೆ ಆಯುಕ್ತ ಅಶ್ವಿಜ ಬಿ.ವಿ., ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles