ತೋವಿನಕೆರೆ: ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ರಸ್ತೆ ಭಾಗ್ಯ ದೊರೆದೆ ದೊಡ್ಡೇಗೌಡನಪಾಳ್ಯ ಹಾಗೂ ಬಡಮುದ್ದನಪಾಳ್ಯ ಗ್ರಾಮಗಳು ಶಾಪಗ್ರಸ್ತವಾಗಿಯೇ ಉಳಿದಿವೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅದರಲ್ಲೂ ಗೃಹಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ನಡೆಸುತ್ತಿರುವ ಡಾ.ಜಿ.ಪರಮೇಶ್ವರ್ ಅವರ ಕ್ಷೇತ್ರದಲ್ಲಿ ಗ್ರಾಮಗಳು ರಸ್ತೆ ಅಭಿವೃದ್ಧಿ ಕಾಣದೆ ಕಾಡುಹಾದಿಯಾಗಿ ಮಾರ್ಪಟ್ಟಿವೆ.
ಇಲ್ಲಿ ಸಂಚರಿಸಲು ಸರಿಯಾದ ರಸ್ತೆಯಿಲ್ಲದೆ ನಿತ್ಯ ಕೆಲಸ ಕಾರ್ಯಗಳಿಗೆ ಹೋಗಲು, ಮಕ್ಕಳನ್ನು ಶಾಲೆಗೆ ಬಿಡಲು, ವಯೋವೃದ್ಧರು ದವಾಖಾನೆಗೆ ತೆರಲು ಪರದಾಡುವಂತ ಸ್ಥತಿ ನಿರ್ಮಾಣವಾಗಿದೆ. ಈ ಎರಡೂ ಗ್ರಾಮದಲ್ಲಿ ಸುಮಾರು 90ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಆದರೆ ಮೂಲ ಸೌಕರ್ಯಗಳು ಮಾತ್ರ ಮರೀಚಿಕೆಯಾಗಿವೆ. ಪ್ರತಿ ಹಳ್ಳಿಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಇಲ್ಲಿನ ಜನಪ್ರತಿನಿಧಿಗಳಾಗಲೀ ಅಥವಾ ಅಧಿಕಾರಿಗಳಾಗಲೀ ಮಾಡಿಲ್ಲ. ಇಲ್ಲಿನ ಅಧಿಕಾರಿಗಳಿಗೆ ಕೆಲಸಮಾಡಲು ಕೈಯಿಲ್ಲ, ಶಾಸಕರಿಗೆ ಕಿವಿ ಕೇಳುವುದಿಲ್ಲ. ಹೀಗಾಗಿ ಕೊರಟಗೆರೆ ಅಭಿವೃದ್ಧಿ ಕಾಣದೆ ಅಕ್ಷರಶಃ ನಲುಗಿ ಹೋಗಿದೆ. ತಾಲೂಕಿನ ಮೂಲೆ ಮೂಲೆಗಳಲ್ಲಿರುವ ಹಳ್ಳಿಗಳು ಈಗಲೂ ಅಭಿವೃದ್ಧಿ ಕಾಣದೆ ಕಗ್ಗಾಡಾಗಿವೆ. ತಮ್ಮ ಸ್ವಕ್ಷೇತ್ರವನ್ನೇ ಅಭಿವೃದ್ಧಿಪಡಿಸಲಾಗದಂತಹ ಸಚಿವರು ಇನ್ನು ರಾಜ್ಯದಲ್ಲಿ ಅದೇನು ಆಡಳಿತ ನಡೆಸುತ್ತಾರೋ ನೋಡಬೇಕಿದೆ ಎಂದು ಕ್ಷೇತ್ರದ ಮತದಾರರು ಟೀಕಿಸುತ್ತಿದ್ದಾರೆ.
ಮಳೆ ಬಂದರೆ ಕೆಸರು ಮಯವಾಗುವ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ. ಅದರಲ್ಲೇ ಜನರು ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಹೊರಟರೆ ರೈತರು ರಸ್ತೆಯಲ್ಲಿ ನಡೆಯಲಾದೆ ಜಮೀನು ಬದುಗಳ ಮೇಲೆ ಹೋಗುತ್ತಿದ್ದಾರೆ. ಇನ್ನೂ ಊರಿಗೆ ಮಾರ್ಗತೋರುವ ನಾಮಫಲಕವಂತೂ ಅಭಿವೃದ್ಧಿಯಲ್ಲಿ ಹಿಂದುಳಿದ ಊರು ಎಂಬ ಹಣೆಪಟ್ಟಿಗೆ ಹೆದರಿ ಬೇಲಿಬೆಂಕಗಳಲ್ಲಿ ಅಡಗಿ ಕುಳಿತಿದೆ.
ಹೀಗೆ ಊರಿಗೆ ಮಾರಿ ಪರರಿಗೆ ಉಪಕಾರಿ ಎನ್ನುವಂತೆ ಇಲ್ಲಿನ ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ. ಇಲ್ಲಿನ ಶಾಸಕರಿಗೆ ತಾಲೂಕಿನಲ್ಲಿ ಎಷ್ಟು ಹಳ್ಳಿಗಳಿವೆ ಎಂದು ಕೇಳಿದರೆ ಬಹುಶಃ ಉತ್ತರಿಸಲಾರರು. ಏಕೆಂದರೆ ಚುನಾವಣೆಯಲ್ಲಿ ಕಾಣಿಸಿಕೊಂಡವರು ಮತ್ತೆ ಹಳ್ಳಿಕಡೆ ಸುಳಿದೇ ಇಲ್ಲ. ʼಕೆಲಸಕ್ಕೆ ಕರೆಯಬೇಡಿ, ಊಟಕ್ಕೆ ಮರೆಯಬೇಡಿʼ ಎನ್ನವಂತೆ ಇಲ್ಲಿನ ಶಾಸಕರಿಗೆ ಜನರ ಮತಗಳು ಬೇಕೇ ಹೊರತು ಅವರ ಅಭಿವೃದ್ಧಿ ಬೇಕಿಲ್ಲ ಎಂಬುದನ್ನು ತಾಲೂಕಿನ ಬಡ ಹಳ್ಳಿಗಳು ಹೇಳುತ್ತಿವೆ.
ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರೆಲ್ಲ ನಾಲ್ಕೈದು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮನವಿ ಏನಿದ್ದರೂ ಮನೆಯಿಂದ ಹೊರಗೆ ಎಂಬಂತಹ ಸ್ವಭಾವ ರೂಢಿಗತವಾದಂತಿದೆ. ತಮ್ಮ 20 ವರ್ಷಗಳ ರಾಜಕೀಯ ಮುತ್ಸದ್ದಿತನಕ್ಕೆ ಕೊರಟಗೆರೆ ಕ್ಷೇತ್ರ ಮುಂದುವರೆದ ತಾಲೂಕಾಗಬೇಕಿತ್ತು. ಆದರೆ, ಇನ್ನೂ ಹಿಂದುಳಿದ ಪ್ರದೇಶವಾಗಿರವುದನ್ನು ನೋಡಿದರೆ ಇವರ ಕಾಯವೈಖರಿ ಅರ್ಥವಾಗುತ್ತದೆ ಎಂದು ರಾಜಕೀಯ ಮುಖಂಡರೊಬ್ಬರು ತಿಳಿಸಿದರು.
ತೋವಿನಕೆರೆ ಗ್ರಾಮ ಪಂಚಾಯ್ತಿಯಿಂದ ತೆರಿಗೆಯನ್ನು ಮಾತ್ರ ಕಾಲಕಾಲಕ್ಕೆ ವಸೂಲಿ ಮಾಡಲಾಗುತ್ತಿದೆ. ಆದರೆ, ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಬಳಕೆಯಾಗುತ್ತಿಲ್ಲ. ಈ ಹಣ ಯಾರಜೇಬು ಸೇರುತ್ತಿದೆ ಎಂಬುದಂತೂ ಅರ್ಥವಾಗುತ್ತಿಲ್ಲ. ಗ್ರಾಮಪಂಚಾಯ್ತಿ ಆಡಳಿತ ಯಂತ್ರವಂತೂ ಕೆಟ್ಟು ನಿಂತಿದೆ. ಗ್ರಾಮಗಳಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸದಿದ್ದ ಮೇಲೆ ಇಲ್ಲಿಗೆ ಗ್ರಾಪಂ ಅವಶ್ಯಕವೇನಿದೆ ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.