ಗುಬ್ಬಿ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಸೆ.5 ರಂದು ಕೇಕ್ ಹೌಸ್ ಮಾಲೀಕ ಬಸವರಾಜು ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದನು. ಆತನ ಸಾವಿಗೆ ಕಾರಣನಾದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತನು ತಾನು ಸಾಯುವುದಕ್ಕಿಂತಲೂ ಮುಂಚೆ ಹೇರೂರು ಗ್ರಾಮದ ನಿವಾಸಿ ನಾಗರಾಜು ಅಲಿಯಾಸ್ ಬಡ್ಡಿನಾಗನಿಗೆ ಸಾಲದ ಹಣ ಹಿಂತಿರುಗಿಸಿದ್ದರೂ ಚೆಕ್ ಗಳನ್ನು ವಾಪಸ್ ಕೊಡದೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ವೀಡಿಯೋ ಮಾಡಿದ್ದನು.
ಈ ಬಗ್ಗೆ ಮೃತನ ಪತ್ನಿ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ ಆರೋಪಿ ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರರುಗಳಾದ ವಿ. ಮರಿಯಪ್ಪ ಮತ್ತು ಬಿ.ಎಸ್. ಅಬ್ದುಲ್ ಖಾದರ್ ರವರ ಹಾಗೂ ಸಿರಾ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬಿ.ಕೆ ಶೇಖರ್ ರವರ ಮಾರ್ಗದರ್ಶನದಲ್ಲಿ ಗೋಪಿನಾಥ ವಿ ಹಾಗೂ ಗುಬ್ಬಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಜಿ.ಕೆ ಹಾಗೂ ನವೀನ್ ಕುಮಾರ್ ಹಾಗೂ ವಿಜಯ್ ಕುಮಾರ್ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿತ್ತು.
ಅದರಂತೆ ತನಿಖೆ ಕೈಗೊಂಡಿದ್ದ ಪೊಲೀಸರು, ದಾಬಸ್‌ಪೇಟೆ ಬಸ್ ನಿಲ್ದಾಣದಲ್ಲಿದ್ದ ಆರೋಪಿ ಬಡ್ಡಿ ನಾಗನನ್ನು ಎರಡು ದಿನಗಳ (ಸೆ.8) ಬಳಿಕೆ ಪತ್ತೆ ಮಾಡಿ ಬಂಧಿಸಿದ್ದು, ಗುಬ್ಬಿ ಕಸಬಾ ಹೋಬಳಿಯಲ್ಲಿರುವ ಹೇರೂರು ಫಾರಂ ತೋಟದ ಮನೆಯ ಶೋಧನೆ ನಡೆಸಿ ಮೃತ ಬಸವರಾಜುಗೆ ಸಂಬಂಧಿಸಿದ ಚೆಕ್ ಗಳು ಹಾಗೂ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಲಂ 108 ಬಿ.ಎನ್.ಎಸ್ ರೀತ್ಯ ಪ್ರಕರಣ ದಾಖಲು ಮಾಡಿ ತನಿಖೆಯನ್ನು ಕೈಗೊಂಡಿದ್ದಾರೆ.
ಆರೋಪಿಯನ್ನು ಬಂಧಿಸಲು ಯಶಸ್ವಿಯಾದ ತಂಡವನ್ನು ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ ಅವರು ಅಭಿನಂದಿಸಿದ್ದಾರೆ.