ಮಧುಗಿರಿ: ಕರ್ತವ್ಯಲೋಪ, ಭ್ರಷ್ಟಾಚಾರದ ಆರೋಪದ
ಮೇಲೆ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯ ಡಾ.ಗಂಗಾಧರ್ ಅವರನ್ನು ಅಮಾನತುಗೊಳಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಕೆ.ವಿ.ಶಿವಪ್ರಕಾಶ್ ಆದೇಶಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಆಗಿದ್ದ ಡಾ.ಗಂಗಾಧರ್ (ನೇತ್ರ ತಜ್ಞರು) ಕಳೆದ ವರ್ಷ ಪಟ್ಟಣದ ಬಾಲಕಿಯೊಬ್ಬಳಿಗೆ ದೃಷ್ಟಿದೋಷದ ಕಾರಣದಿಂದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದು ಕನ್ನಡಕ ಧರಿಸುವಂತೆ ಹೇಳಿದ್ದಾರೆ. ಅಲ್ಲದೆ, ಕನ್ನಡಕಕ್ಕಾಗಿ ಬಾಲಕಿಯಿಂದ 1300 ರೂ. ಹಣ ಪಡೆದಿದ್ದರು. ಈ ಬಗ್ಗೆ 2023ರ ಡಿ.14ರಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯ ಜಾಗೃತದಳದ ಆಯುಕ್ತರ ಸಮ್ಮುಖವೇ ಲಂಚ ಮುಕ್ತ ತುಮಕೂರು ವೇದಿಕೆಯ ಹೋರಾಟಗಾರರು ವೈದ್ಯ ಗಂಗಾಧರ್ ಅವರಿಂದ ಬಾಲಕಿಗೆ ಹಣ ವಾಪಸ್ ಕೊಡಿಸಿದ್ದರು. ಈ ವಿಡಿಯೋ ಕೂಡ ಗಮನಿಸಿದ ಆಯುಕ್ತರು, ಲಂಚ ಆರೋಪದ ಜತೆಗೆ ವೈದ್ಯ ಗಂಗಾಧರ್ ಸಹಾಯಕ ರವಿ (ಗುತ್ತಿಗೆ ಸಿಬ್ಬಂದಿ) ಕೂಡ ಹನುಮಕ್ಕ ಎಂಬ ವೃದ್ಧೆಯಿಂದ 2,300 ರೂ. ಪಡೆದಿದ್ದು, ಒಟ್ಟು 3800 ರೂ. ದೂರುದಾರರಿಗೆ ವಾಪಸ್ ಕೊಡಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ವೈದ್ಯ ಡಾ.ಗಂಗಾಧರ್ ಅವರಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದರೂ, ಆಯುಕ್ತಾಲಯಕ್ಕೆ ಸಮಜಾಯಿಷಿ ನೀಡಿಲ್ಲ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಗೊಳಿಸಿ ಆದೇಶಿಸಲಾಗಿದೆ.

ಜತೆಗೆ ಅಮಾನತ್ತಾದ ವೈದ್ಯರನ್ನು ವರ್ಗಾವಣೆ ಮಾಡಿ ವಿಚಾರಣೆ ಕಾಯ್ದೆರಿಸಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿದೆ. ಇದೇ ವೈದ್ಯರ ಮೇಲೆ ಮತ್ತೊಂದು ಇಲಾಖೆ ವಿಚಾರಣೆ ಬಾಕಿಯಿದ್ದು ದೂರು ದಾಖಲಾಗಿ ಪ್ರಕರಣ ನಡೆಯುತ್ತಿದ್ದು, ಆದೇಶ ಬರುವುದೊಂದೇ ಬಾಕಿಯಿದೆ ಎಂದು ತಿಳಿದು ಬಂದಿದೆ.
