ಶಿರಾ: ಪರಿಸರ ಸ್ವಚ್ಛವಾಗಿದ್ದರೆ ಎಲ್ಲರೂ ಆರೋಗ್ಯದಿಂದ ಬದುಕಬಹುದು. ಆದ್ದರಿಂದ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಹೇಳಿದರು.
ಅವರು, ಶುಕ್ರವಾರ ನಗರದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸ್ವಚ್ಛತಾ ಸೇವಾ ಅಬಿಯಾನ-2024ಕ್ಕೆ ಚಾಲನೆ ನೀಡಿ ಮಾತನಾಡಿದರು.
ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಶುಚಿತ್ವ ಹೊಂದಿರುವ ಪ್ರದೇಶಗಳಲ್ಲಿ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗಿ ಡೆಂಘೀ, ಮಲೇರಿಯಾ ಸೇರಿದಂತೆ ಇತರೆ ಸಾಂಕ್ರಮಿಕ ಮಾರಕ ರೋಗ ಹರಡುವ ಸಾಧ್ಯತೆ ಇದೆ. ನಾವು ಹೇಗೆ ಪ್ರತಿನಿತ್ಯ ಸ್ವಚ್ಛವಾಗಿರುತ್ತೇವೋ ಅದೇ ರೀತಿ ನಮ್ಮ ಮನೆ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡು ಉತ್ತಮ ಪರಿಸರ ಹೊಂದಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಹಾಗೂ ಅಕ ಸಿವಿಲ್ ನ್ಯಾಯಾಧೀಶರಾದ ನರಸಿಂಹಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಎಚ್.ಪಿ.ಧರಣೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಗುರುಮೂರ್ತಿ ಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ ಜವನಯ್ಯ, ವಕೀಲರಾದ ವೈ.ಟಿ.ರಾಮಚಂದ್ರಪ್ಪ, ಹೊನ್ನೇಶ್ ಗೌಡ, ಪುರುಷೋತ್ತಮ್, ಸೇರಿದಂತೆ ನಗರಸಭೆಯ ಸಿಬ್ಬಂದಿಗಳು ಹಾಜರಿದ್ದರು.