ತುಮಕೂರು : ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ರಚಿಸಲಾಗಿದ್ದು, ಈ ಸಮಿತಿಗೆ ವಿಶ್ವಕರ್ಮ ಸಮುದಾಯದ ಒಬ್ಬ ನಾಮನಿರ್ದೇಶಿತ ಸದಸ್ಯರನ್ನು 2 ವರ್ಷಗಳ ಅವಧಿಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ನಾಮನಿರ್ದೇಶಿತ ಸದಸ್ಯರಾಗಬಯಸುವವರು ತುಮಕೂರು ಜಿಲ್ಲೆಯವರಾಗಿದ್ದು, ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿರಬೇಕು. ಜಿಲ್ಲೆಯಲ್ಲಿ ಕನಿಷ್ಠ 15 ವರ್ಷ ವಾಸವಿದ್ದು, ಕನಿಷ್ಟ 35 ವರ್ಷದಿಂದ ಗರಿಷ್ಠ 65 ವರ್ಷ ವಯೋಮಿತಿಯೊಳಗಿರಬೇಕು. ಕನಿಷ್ಟ ಎಸ್.ಎಸ್.ಎಲ್.ಸಿ.ಯವರೆಗೆ ವಿದ್ಯಾಭ್ಯಾಸ ಮಾಡಿರಬೇಕು. ಸಂಬಂಧಿಸಿದ ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ವಿಶ್ವಕರ್ಮ ಜನಾಂಗದವರು ವಾಸಿಸುವ ಸ್ಥಳ, ಕೈಗೊಳ್ಳುತ್ತಿರುವ ಉದ್ಯೋಗ, ಇತ್ಯಾದಿ ಅಂಕಿ ಅಂಶಗಳ ಮಾಹಿತಿ ತಿಳಿದಿರಬೇಕು. ಆಯ್ಕೆಯಾಗುವ ವ್ಯಕ್ತಿಯು ನಿಗಮದಲ್ಲಿ ಅನುಷ್ಠಾನಗೊಳ್ಳುತ್ತಿರುವ ಪಂಚವೃತ್ತಿ ಯೋಜನೆಗಳ ಪರಂಪರಾಗತವಾಗಿ ಸ್ವಂತ ನಿರ್ವಹಿಸಿರುವ ಅನುಭವ ಹೊಂದಿರಬೇಕು ಹಾಗೂ ಯಾವುದೇ ರೀತಿಯ ಕ್ರಿಮಿನಲ್ ಮೊಕ್ಕದ್ದಮೆಗಳನ್ನು ಎದುರಿಸುತ್ತಿರಬಾರದು. ದಂಡ/ಜುಲ್ಮಾನೆ/ಶಿಕ್ಷೆ ಅನುಭವಿಸಿರಬಾರದು.
ಆಯ್ಕೆಯಾದ ನಾಮನಿರ್ದೇಶಿತ ಸದಸ್ಯರ ಕಾಲಾವಧಿಯು ನೇಮಕಗೊಂಡ ದಿನದಿಂದ 2 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಸತತ 3 ಸಭೆಗಳಿಗೆ ಗೈರು ಹಾಜರಾದಲ್ಲಿ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರು/ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿದಲ್ಲಿ ಅಂತಹವರನ್ನು ವಜಾ ಮಾಡಲಾಗುವುದು. ನಾಮನಿರ್ದೇಶಿತ ಸದಸ್ಯರಿಗೆ ನಿಗಮದಿಂದ ಯಾವುದೇ ರೀತಿಯ ಗೌರವಧನ, ಇತರೆ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ. ನಿವೃತ್ತ ಸರ್ಕಾರಿ/ಅರೆ ಸರ್ಕಾರಿ ನೌಕರರು ಆಯ್ಕೆ ಸಮಿತಿಯ ಸದಸ್ಯರಾಗಬಯಸಿದ್ದರೆ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ ಜವಾಬ್ದಾರಿ/ಪಾರದರ್ಶಕ ಗುಣ ಹೊಂದಿದವರನ್ನು ಆಯ್ಕೆ ಮಾಡಲಾಗುವುದು.
ಅರ್ಹ ವಿಶ್ವಕರ್ಮ ಮತ್ತು ಅದರ ಉಪಜಾತಿಗಳಿಗೆ ಸೇರಿದವರು ನವೆಂಬರ್ 7ರ ಸಂಜೆ 4.30ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣಕ್ಕಾಗಿ ಚುನಾವಣಾ ಗುರುತಿನಚೀಟಿ/ಪಡಿತರ ಚೀಟಿ/ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಶಾಲಾ ವರ್ಗಾವಣೆ ಪತ್ರ ಹಾಗೂ ಇತ್ತೀಚಿನ ಭಾವಚಿತ್ರವನ್ನು ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂ.ಸಂಖ್ಯೆ 0816-2005008ಗೆ ಸಂಪರ್ಕಿಸಬೇಕೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.