ಶಿರಾ: ಪುನೀತ್ ರಾಜ್ಕುಮಾರ್ ಅವರು ಯಾರೇ ಕಷ್ಟ ಎಂದು ಬಂದರೂ ಅವರಿಗೆ ಸಹಾಯ ಮಾಡಿ ಯಾರಿಗೂ ಹೇಳಬಾದೆಂದು ಹೇಳುತ್ತಿದ್ದ ಮಹಾನ್ ದಾನಿಯಾಗಿದ್ದರೂ ಸದಾ ಕ್ರೀಯಾಶೀಲರಾಗಿ ಇರುತ್ತಿದ್ದ ಪವರ್ ಸ್ಟಾರ್ ಪುನೀತ್ ಅವರು ಕನ್ನಡ ಚಿತ್ರರಂಗಕ್ಕೆ ಅತೀ ಚಿಕ್ಕ ವಯಸ್ಸಿನಲ್ಲೇ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಕನಕ ಬ್ಯಾಂಕ್ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯರಾದ ಎಸ್.ಎಲ್.ರಂಗನಾಥ್ ಹೇಳಿದರು.
ಅವರು ರಂಗನಾಥ ನಗರದ “ಅಪ್ಪು ಅಭಿಮಾನಿ ಬಳಗ ಮತ್ತು “ಅಪ್ಪು ಯೂತ್ ಬ್ರಿಗೇಡ್” ವತಿಯಿಂದ ಅಪ್ಪು ಅವರ 3ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ “ಅಪ್ಪು ನಮನ” ಹಾಗೂ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪುನೀತ್ ರಾಜ್ಕುಮಾರ್ ಕರ್ನಾಟಕ ಕಂಡ ಅಪ್ರತಿಮೆ ನಟ, ಸಮಾಜ ಸೇವಕ, ಪುನೀತ್ ಅವರ ಸಾವು ಇಡೀ ರಾಜ್ಯಕ್ಕೆ ತುಂಬಲಾದರ ನಷ್ಟ. ಪುನೀತ್ ರಾಜ್ಕುಮಾರ್ ಅವರು ಸಾವನಪ್ಪಿದ್ದರೂ ಅವರು ಇನ್ನು ನಮ್ಮ ನಡುವೆ ಇದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮೂದ್ ಮಾತನಾಡಿ, ಪುನೀತ್ ರಾಜ್ಕುಮಾರ್ ಅವರು ಸರಳ ಸಜ್ಜನಿಕೆಯ ಮಾನವೀಯ ಮೌಲ್ಯ ಉಳ್ಳ ಮೇರು ನಟರಾಗಿದ್ದರು, ಅವರು ಜಾತಿ, ಧರ್ಮ ಮೀರಿ ಜನಸೇವೆ ಮಾಡಿದ್ದಾರೆ. ಅವರ ನೆನಪಿಗಾಗಿ ನಗರದ ದರ್ಗಾ ಸರ್ಕಲ್ನಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದವರೆಗೆ ಪುನೀತ್ ರಾಜ್ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದರು.
ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ, ಪುನೀತ್ ರಾಜ್ಕುಮಾರ್ ಅವರ ಸವಿ ನೆನಪಿಗಾಗಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್ಬುಕ್ ವಿತರಿಸುತ್ತಿರುವುದು ಶ್ಲಾಘನೀಯ. ಇದೇ ರೀತಿ ಅಪ್ಪು ಅಭಿಮಾನಿಗಳು ಸಮಾಜದಲ್ಲಿನ ಯಾವುದೇ ಸಮಸ್ಯೆಗಳಿಗೆ ಹೋರಾಟದಲ್ಲಿ ಭಾಗವಹಿಸಬೇಕು. ಅಪ್ಪು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಪೂಜಾರ ಮುದ್ದನಹಳ್ಳಿಯ ಚಿದಾನಂದ ಭಾರತಿ ಸ್ವಾಮೀಜಿ ಅವರು ಮಾತನಾಡಿ, ಪುನೀತ್ ಅವರು ದಾನಿಯಾಗಿ, ಜ್ಞಾನಿಯಾಗಿ, ನೊಂದವರ ಕಣ್ಣಿರ ಒರೆಸುತ್ತ ನಾಡಿನ ಸೇವೆ ಮಾಡಿದ್ದಾರೆ. ಅವರ ಸ್ಮರಣೆ ಅತ್ಯಂತ ಆದರಣೀಯ. ಅವರ ರೀತಿ ನಾವು ಬದುಕಲು ಸಂಕಲ್ಪ ಮಾಡಬೇಕು. ಅವರ ಹೆಸರಿನಲ್ಲಿ ಸರಕಾರಿ ಶಾಲೆಯ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ಬುಕ್ ನೀಡುತ್ತಿರುವುದು ಶ್ಲಾಘನೀಯ. ಇಂತಹ ಪವಿತ್ರ ಕಾರ್ಯ. ಅಪ್ಪು ಅವರ ಸೇವೆ ನೊಂದನವಿಗೆ ದೀನ ದಲಿತರಿಗೆ ಸಹಾಯ ಮಾಡುವ ಮೂಲಕ ಅಪ್ಪು ಅವರನ್ನು ನೆನೆಯೋಣ ಎಂದರು.
ಕನಕ ಬ್ಯಾಂಕ್ ನಿರ್ದೇಶಕ ಹಾಗೂ ಅಪ್ಪು ಯೂತ್ ಬ್ರಿಗೇಡ್ ಅಧ್ಯಕ್ಷ ಕಡೆಮನೆ ಎಸ್ ರವಿಕುಮಾರ್ ಮಾತನಾಡಿ ಪುನೀತ್ ರಾಜ್ಕುಮಾರ್ ಅವರನ್ನು ಈ ನಾಡು, ಈ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಪ್ಪು ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ಅವರನ್ನು ನೆನೆಯುವ ಕೆಲಸ ಮಾಡಬೇಕು. ಅಪ್ಪು ಅವರು ಹೃದಯ ವೈಶಾಲ್ಯತೆ, ಮನುಷ್ಯತ್ವ, ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಅವರ ನೆನಪಿಗಾಗಿ ನಗರದ ದರ್ಗಾ ಸರ್ಕಲ್ನಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದವರೆಗೆ ಪುನೀತ್ ರಾಜ್ಕುಮಾರ್ ಹೆಸರು ನಾಮಕರಣ ಮಾಡಬೇಕು ಹಾಗೂ ಅಪ್ಪು ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಗಿರಿಜ ವಿಜಯ್ಕುಮಾರ್, ಕೃಷ್ಣಪ್ಪ, ಮಾಜಿ ನಗರಸಭಾ ಸದಸ್ಯರಾದ ಬಸವರಾಜು, ಶಿಕ್ಷಕರಾದ ಬಿ.ಟಿ.ರಂಗನಾಥ್, ಸುಮ, ಮುಖಂಡರಾದ ಸೋಮಶೇಖರ್, ರಂಗನಾಥ್ (ಅಪ್ಪಿ), ಶ್ರೀರಂಗ, ಸುರೇಶ್, ಹೇಂತ್, ಡಾ.ಚಂದನ್, ನಿರ್ಮಲದೇವಿ, ಮೊಹಮ್ಮದ್ ಜಾಫರ್, ಆರ್.ಕಂಬಣ್ಣ, ಹನುಮಂತ, ಹೆಚ್.ಸತೀಶ್, ಮಂಜುನಾಥ್, ಜಯರಾಮಕೃಷ್ಣ, ವ್ಯವಸ್ಥಾಪಕರಾದ ಸಚಿನ್, ತಿಪ್ಪೇಶ್ ಕೆ.ಕೆ., ಕಿರಣ್ ನಾದೂರು, ಶ್ರೀರಂಗ ಸೇರಿದಂತೆ ಹಲವರು ಹಾಜರಿದ್ದರು.