ಶಿರಾ : ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲರ ಸಹಬಾಗಿತ್ವ ಅವಶ್ಯಕವಾಗಿದೆ. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಆಸೆ ಆಮಿಷಗಳಿಗೆ ಒಳಗಾಗಬಾರದು. ತಮ್ಮ ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಬೇಕು. ಪೋಷಕರ ಬುದ್ದಿ ಮಾತುಗಳಿಗೆ ಗೌರವ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸಾ ಹೇಳಿದರು.
ಅವರು ನಗರದ ಕನ್ನಡ ಭವನದಲ್ಲಿ ಯುನಿಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೊಬಿಲಿಟಿ ಇಂಡಿಯಾ, ಶಾಲಾ ಶಿಕ್ಷಣ ಇಲಾಖೆ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಸಂಸತ್ 2024 ಜಿಲ್ಲಾಮಟ್ಟದ ಸಮಾಲೋಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಸಮಸ್ಯೆ ಪೋಷಕರಿಗೂ ಸೇರಿದಂತೆ ಸಮಾಜಕ್ಕೆ ಕಾಡುತ್ತಿದ್ದು, ಮಕ್ಕಳು ಶಿಕ್ಷಕರ, ಪೋಷಕರ ಸಲಹೆ ಸೂಚನೆಯನ್ನು ಪಾಲನೆ ಮಾಡಿ, ಹೆಣ್ಣು ಮಕ್ಕಳು ಬಾಲ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಶಿರಾ ತಾಲೂಕು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಅವರು ಮಾತನಾಡಿ, ಪೋಷಕರು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಶ್ರಮಿಸಬೇಕು. ಪೋಕ್ಸೋ ಕಾಯ್ದೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶೇಷಚೇತನ ಮಕ್ಕಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಇಓ ಕೃಷ್ಣಪ್ಪ, ವಕೀಲರ ಸಂಘದ ಅಧ್ಯಕ್ಷ ಧರಣೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಗುರುಮೂರ್ತಿ ಗೌಡ, ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ, ಮೊಬಿಲಿಟಿ ಇಂಡಿಯಾ ವ್ಯವಸ್ಥಾಪಕ ಆನಂದ್ ಎಸ್.ಎನ್, ಇಸಿಓ ಕರಿಯಣ್ಣ, ದೊಡ್ಡಯ್ಯ, ಎಂ.ಆರ್.ಡಬ್ಲ್ಯೂ ಚಿತ್ತಯ್ಯ ಸೇರಿದಂತೆ ಹಲವರು ಹಾಜರಿದ್ದರು.