ತುಮಕೂರು | 106 ಕೋಟಿ ರಿಸರ್ವ್ ಫಂಡ್; ಬ್ಯಾಂಕಿನ ಆಡಳಿತಕ್ಕೆ ಹಿಡಿದ ಕೈಗನ್ನಡಿ: ಕೆಎನ್ಆರ್

ತುಮಕೂರು:ಒಂದು ಸಂಸ್ಥೆಯ ಪ್ರಾರಂಭ ಸುಲಭ. ಆದರೆ ಅದೇ ಸಂಸ್ಥೆ 100 ವರ್ಷಗಳ ಕಾಲ ಗ್ರಾಹಕರ ಸೇವೆ ಮಾಡಿ, ಅವರ ವಿಶ್ವಾಸ ಗಳಿಸಿಕೊಂಡಿರುವುದು ಮಹತ್ವದ್ದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ನಗರದ ಹೆಗ್ಗೆರೆಯಲ್ಲಿರುವ ಹೆಚ್.ಎಂ.ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ವೈಶ್ಯ ಕೋ-ಅಪರೇಟಿವ್ ಬ್ಯಾಂಕಿನ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡುತಿದ್ದ ಅವರು, 100 ವರ್ಷಗಳ ಹಿಂದೆ ಪ್ರಾರಂಭವಾದ ವೈಶ್ಯ ಕೋ-ಅಪರೇಟಿವ್ ಬ್ಯಾಂಕು ಜಿಲ್ಲೆಯ ವಾಣಿಜ್ಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗ್ರಾಹಕರು ಬ್ಯಾಂಕಿನೊಂದಿಗೆ ಹೆಚ್ಚಿನ ಸಂಬಂಧ ಹೊಂದಿ, ತಾವು ಬೆಳೆಯುವುದರ ಜೊತೆಗೆ, ಬ್ಯಾಂಕ್‌ನ್ನು ಬೆಳೆಸಿದ್ದಾರೆ  ಎಂದರು.

ಇಂದು ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿಯೂ ಹಣದ ಅರಿವು ಇದೆ. ಆದರೆ ಸಾಲ ಸೌಲಭ್ಯ ಒದಗಿಸಲು ಉತ್ತಮ ಗ್ರಾಹಕರ ಕೊರತೆ ಇದೆ. ಹಣಕಾಸು ಸಂಸ್ಥೆಗಳು ಹೆಚ್ಚಾದಂತೆ ಗ್ರಾಹಕರಿಗೆ ಅಯ್ಕೆಗೆ ಹೆಚ್ಚಿನ ಅವಕಾಶಗಳಿವೆ. ಅತಿ ಕಡಿಮೆ ಬಡ್ಡಿಗೆ ಯಾರು ಸಾಲ ಸೌಲಭ್ಯ ನೀಡುವ ಸಂಸ್ಥೆಗಳನ್ನು ಅವರು ಆಯ್ಕೆ ಮಾಡುತ್ತಾರೆ. ಸೌಹಾರ್ದ ಸಹಕಾರಿ ಸಂಸ್ಥೆಗಳ ಉದಯದ ನಂತರ ಸಹಕಾರಿ ಬ್ಯಾಂಕುಗಳ ಡಿಪಾಸಿಟ್ ಸಂಗ್ರಹದಲ್ಲಿ ಹಿನ್ನೆಡೆಯಾಗಿದೆ. ಆದರೆ ಸೌಹಾರ್ದ ಸಹಕಾರಿ ಸಂಘಗಳ ಕಾರ್ಯ ವೈಖರಿ ಚನ್ನಾಗಿಲ್ಲ. ಸುಮಾರು 45ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಸಂಘಗಳು ಗ್ರಾಹಕರು ಇಟ್ಟಿದ್ದ ಡಿಪಾಸಿಟ್ ಹಣ ಕೊಡಲು ಹಣವಿಲ್ಲದಂತಾಗಿದೆ. ಅನಾರೋಗ್ಯಕರ ಪೈಪೋಟಿಯಿಂದ ಸುಮಾರು ರೂ. 2650 ಕೋಟಿ  ಅವ್ಯವಹಾರ ನಡೆದಿದೆ. ಗ್ರಾಹಕರ ಶೋಷಣೆ ತಪ್ಪಬೇಕಾಗಿದೆ ಎಂದು ಕೆ.ಎನ್.ರಾಜಣ್ಣ ಆರೋಪಿಸಿದರು.

ಕೃಷಿ ಮತ್ತು ಕೃಷಿಯೇತರ ಬ್ಯಾಂಕುಗಳ ನಿರ್ವಹಣೆ ಆರ್.ಬಿ.ಐ ದ್ದಾಗಿದೆ. ಅಲ್ಲಿಂದ ಆಗಿಂದಾಗ್ಗೆ ಬರುವ ಸುತ್ತೊಲೆಗಳನ್ನು ನೋಡಿದರೆ ಬ್ಯಾಂಕುಗಳನ್ನು ನಡೆಸಲು ಸಾಧ್ಯವೇ ಇಲ್ಲ. ಸಿಎಂಎ ನಿಯಮ ಪಾಲಿಸಿದರೆ ಯಾವ ರೈತರಿಗೂ ಸಾಲ ನೀಡಲು ಸಾಧ್ಯವಿಲ್ಲ. ಉತ್ತಮ ಗ್ರಾಹಕರ ಹುಡುಕುವುದೇ ದೊಡ್ಡ ಸವಾಲಾಗಿದೆ. ಫೋರ್ಜರಿ ದಾಖಲೆಗಳಿಗೆ ಸಾಲ ಸೌಲಭ್ಯ ನೀಡಿ, ಪರದಾಡುತ್ತಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಇಂತಹ ದುಸ್ತರದ ದಿನಗಳ ನಡುವೆಯೂ 106 ಕೋಟಿ ರಿಸರ್ವ್ ಫಂಡ್ ಹೊಂದಿರುವುದು ವೈಶ್ಯ ಕೋ-ಅಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆಗೆ ಹಿಡಿದ ಕನ್ನಡಿ ಎಂದು ಕೆ.ಎನ್.ರಾಜಣ್ಣ ಪ್ರಶಂಶಿಸಿದರು.

ರಾಜಕೀಯವಾಗಿ ನಾನು ಮಧುಗಿರಿಯಲ್ಲಿದ್ದರೂ, ನನ್ನ ಕರ್ಮ ಭೂಮಿ ತುಮಕೂರು. ಹಿಂದುಳಿದ ಸಮುದಾಯಗಳು ನನ್ನ ಕೈ ಹಿಡಿದು ನಡೆಸಿವೆ. 1994ರಲ್ಲಿ ನಾನು ತುಮಕೂರು ಕ್ಷೇತ್ರದಿಂದ ಚುನಾವಣೆಗೆ ನಿಂತಾಗ ಎಲ್ಲ ಹಿಂದುಳಿದ, ಮುಂದುವರೆದ ಸಮಾಜಗಳು ಕೈಹಿಡಿದು ಸುಮಾರು 27 ಸಾವಿರ ಮತಗಳು ಪಡೆಯಲು ಸಾಧ್ಯವಾಯಿತು. ಅನಂತರಾಮಶೆಟ್ಟರು ಅಂದಿಗೆ ಸುಮಾರು 500 ಜನರ ಪಟ್ಟಿ ನೀಡಿ, ಮತ ಹಾಕಿಸುವ ಭರವಸೆ ನೀಡಿದ್ದರು ಎಂದು ತಮ್ಮ ರಾಜಕೀಯದ ಆರಂಭದ ದಿನಗಳನ್ನು ನೆನೆದರು.

ಗ್ರಾಹಕರಲ್ಲಿ ನಿರ್ಲಕ್ಷ ಮನೋಭಾವ ಬೇಡ. ಸಾಲ ಮತ್ತು ಬಡ್ಡಿಯನ್ನು ಸಕಾಲಕ್ಕೆ ಕಟ್ಟುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸೊಸೈಟಿಗಳ ಮೂಲಕ ನೀಡುವ ಸಾಲ ಸರಕಾರದ ಹಣವಲ್ಲ. ಅದು ಗ್ರಾಹಕರು ನೀಡಿರುವ ಡಿಪಾಸಿಟ್ ಹಣ. ಸಾಲ ತೀರಿಸಲು ಕ್ರಮ ಕೈಗೊಳ್ಳಬಾರದು ಎಂದು ಹೇಳುತ್ತವೆ. ಆದರೆ ಹಣಕಾಸಿನ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಒಳ್ಳೆಯದಲ್ಲ. ಇಲ್ಲದಿದ್ದರೆ ಇಡೀ ವ್ಯವಸ್ಥೆಯೇ ಹಾಳಾಗಲಿದೆ. ಇಡೀ ಸಹಕಾರ ಆಂದೋಲನವೇ ಬುಡಮೇಲಾಗುತ್ತದೆ. ಸರಕಾರ ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಪೂರಕವಾಗಿರಬೇಕೇ ಹೊರತು, ಮಾರಕವಾಗಬಾರದು ಎಂದು ಮಾರ್ಮಿಕವಾಗಿ ನುಡಿದರು.

ಶಾಸಕ ಜಿ.ಬಿ.ಜೋತಿ ಗಣೇಶ್ ಮಾತನಾಡಿ, ಸಿಐಟಿ ಶಿಕ್ಷಣ ಸಂಸ್ಥೆಯ ಬೆಳವಣಿಗೆಯೇ ಹಿಂದೆ ವೀರಶೈವ ಸಹಕಾರಿ ಬ್ಯಾಂಕ್ ಹಾಗೂ ವೈಶ್ಯ ಕೋ-ಅಪರೇಟಿವ್ ಬ್ಯಾಂಕಿನ ಸಹಕಾರ ಇದೆ. ಇವರನ್ನು ಸ್ಮರಿಸುತ್ತೇನೆ. ಕಳೆದ 10 ವರ್ಷಗಳಿಂದ ಗೋವಿಂದರಾಜು ಮತ್ತು ರಾಮಮೂರ್ತಿ ಅವರುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಣ್ಣದಾಗಿ ಆರಂಭವಾಗಿ ಇಂದು ಬೃಹದಾಕಾರವಾಗಿ ಬೆಳೆದಿರುವ ಬ್ಯಾಂಕಿನ ಹಿಂದಿನ ಹಲವರ ಶ್ರಮವಿದೆ ಎಂದರು.

ವಿಧಾನಪರಿಷತ್ ಸದಸ್ಯ ಅರುಣ್‌ಕುಮಾರ್,  ಕಾರ್ಯಕ್ರಮದಲ್ಲಿ ವೈಶ್ಯ ಕೋ-ಅಪರೇಟಿವ್ ಬ್ಯಾಂಕಿನ ಅಧ್ಯಕ್ಷ ಗೋವಿಂದರಾಜು ಮಾತನಾಡಿದರು.

ವೇದಿಕೆಯಲ್ಲಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಡಾ.ಅರ್.ಎಲ್.ರಮೇಶ್‌ಬಾಬು, ವೈಶ್ಯ ಕೋ-ಅಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷ ರಾಮಮೂರ್ತಿ, ಸಿ.ಇ.ಓ ಸುಮ ಸೇರಿದಂತೆ ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles