ಗುಬ್ಬಿ : ವೀರವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ,ಧೈರ್ಯ ಮತ್ತು ಸಾಹಸಗಳು ನಾಡಿನ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಬೇಕು ಎಂದು ತಹಶೀಲ್ದಾರ್ ಆರತಿ ಬಿ. ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಕಂದಾಯ ಭವನದಲ್ಲಿ ತಾಲ್ಲೂಕು ಆಡಳಿತ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಏರ್ಪಡಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಒನಕೆ ಓಬವ್ವನವರು ಸಹ ಒಬ್ಬರಾಗಿದ್ದಾರೆ. ಓಬವ್ವ ನಾರಿಶಕ್ತಿಯ ಪ್ರತೀಕ. ಸಮಯ ಪ್ರಜ್ಞೆಯಿಂದ ವೈರಿಗಳ ರುಂಡ ಚೆಂಡಾಡಿದ ವೀರ ವನಿತೆ, ಇವರು ಎಲ್ಲಾ ಮಹಿಳೆಯರಿಗೂ ಆದರ್ಶವಾಗಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಯತೀಶ್ ಮಾತನಾಡಿದರು.
ಇದೇ ವೇಳೆ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಕೋಲುಕಾರ ಗುಬ್ಬಿ ರವಿ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ತುಳಸಿಬಾಯಿ, ಭೈರಪ್ಪ, ಮಲಮಾಚನಕುಂಟೆ ಕಹಳೆ ವಾದ್ಯ ಶಂಕರಪ್ಪ, ನಾಟಕ, ಸಂಗೀತ ನಿರ್ದೇಶಕ ಐ.ಆರ್ ವಿಶ್ವನಾಥ್, ಸೋಬಾನೆ ಪದ ಹಾಡುವ ನರಸಮ್ಮ, ಸಿದ್ದಗಂಗಮ್ಮ, ಕಲಾವಿದೆ ಭಾಗ್ಯಮ್ಮ ಡಾ.ತಿಮ್ಮಯ್ಯ, ಸಂಘಟನಕಾರ ನಾಗರಾಜು, ಬಿ.ಲೋಕೇಶ್, ಲೋಕೇಶ.ಡಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಬಿಂದು ಮಾಧವ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಒಬಿಸಿ ಇಲಾಖೆ ಸಹಾಯಕ ನಿರ್ದೇಶಕಿ, ಎಇ ಮತ್ತಿತರರು ಉಪಸ್ಥಿತರಿದ್ದರು.