ತುಮಕೂರು: ಸಾಮಾಜಿಕ ವಾಸ್ತವ ಹಾಗೂ ಅರಿವು ಪಡೆಯಲು ವಿದ್ಯಾರ್ಥಿಗಳು ರೈತ ಚಳವಳಿ, ಸಮತಾವಾದಿ ಚಳವಳಿಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಇದರಿಂದ ಸೋಷಿಯೋ ಎಕನಾಮಿಕ್ ಅರ್ಥವಾಗುವುದರೊಂದಿಗೆ ವಕೀಲಿ ವೃತ್ತಿಗೂ ಅನುಕೂಲವಾಗುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ವಕೀಲರಾದ ವೀರೇಂದ್ರ ಪಿ.ಎಂ ತಿಳಿಸಿದರು.
ನಗರದ ಶೆಟ್ಟಿಹಳ್ಳಿ ರಸ್ತೆಯ ಸುಫಿಯ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ 2024-25ನೇ ಶೈಕ್ಷಣಿಕ ಸಾಲಿನ ಕ್ರೀಡೆ, ಎನ್ ಎಸ್ ಎಸ್, ಕಾನೂನು ಸೇವೆಗಳ ಕೇಂದ್ರ, ಯುವ ರೆಡ್ ಕ್ರಾಸ್, ಸಾಂಸ್ಕೃತಿಕ ಹಾಗೂ ಇತರೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಕಾನೂನು ಶಿಕ್ಷಣ: ಅವಕಾಶಗಳು ಮತ್ತು ಸವಾಲುಗಳು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಕಾರ್ಪೊರೇಟ್ ಕ್ಷೇತ್ರ ದಿನದಿಂದ ದಿನಕ್ಕೆ ವಿಸ್ತರಿಸಿಕೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ತಯಾರಿ ಅಗತ್ಯವಾಗಿದೆ. ವ್ಯವಹಾರಿಕ ಜಗತ್ತಿಗೆ ಹೊಂದಿಕೊಳ್ಳಲು ಸಿನಿಮಾ, ವಾಣಿಜ್ಯ ವಿಷಯಾಂಶಗಳನ್ನೂ ಬಿಡದೆ ಅಧ್ಯಯನ ಮಾಡಬೇಕು. ಭಾಷಾ ಕೌಶಲ್ಯ, ಬರವಣಿಗೆ, ಸಂವಹನ ಕಲೆ ವಕೀಲಿ ವೃತ್ತಿಯಲ್ಲಿ ಕೈ ಹಿಡಿಯುತ್ತದೆ. ಇಂಗ್ಲೀಷ್ ಜೊತೆಗೆ ಮಾತೃ ಭಾಷೆ ಕನ್ನಡದಲ್ಲಿ ಸುಸ್ಪಷ್ಟವಾಗಿ ವ್ಯವಹರಿಸಲು ಅಭ್ಯಾಸ ಮಾಡಿ ಹಾಗೂ ಮಾತುಗಳಲ್ಲಿ ಲಯ ಇರಲಿ. ಹೀಗೆ ಮಾತನಾಡುವ ಕಲೆಯನ್ನು ಕಲಿಯಲು ಜಾರ್ಜ್ ಫರ್ನಾಂಡೀಸ್, ವಾಜಪೇಯಿಯಂತಹ ರಾಜಕಾರಣಿಗಳ ಭಾಷಣಗಳನ್ನು ಕೇಳಲು ಸಲಹೆ ನೀಡಿದರು.
ಸಿನೆಮಾ ಕೇವಲ ಮನರಂಜನೆ ಮಾತ್ರವಲ್ಲ. ವಕೀಲರಿಗೆ ಆದಾಯ ತಂದು ಕೊಡುವ ಕ್ಷೇತ್ರವೂ ಹೌದು. ಕೃತಿಚೌರ್ಯ, ರಾಜದ್ರೋಹ, ಧರ್ಮನಿಂದನೆ ಯಂತಹ ಅಂಶಗಳು ಇದರಲ್ಲಿವೆ. ಇಲ್ಲಿ ಕಕ್ಷಿದಾರರೂ ಸಿಗುತ್ತಾರೆ. ಕಾನೂನು ಕ್ಷೇತ್ರಕ್ಕೆ ಯಾವುದೇ ಮಿತಿಇಲ್ಲ. ಆದ್ದರಿಂದ ಅಧ್ಯಯನದಲ್ಲಿ ಉದಾಸೀನತೆ ಬೇಡ ಎಂದು ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳು ಹಿಂಜರಿಕೆ ಹಾಗೂ ಭಯ ಮುಕ್ತರಾಗಬೇಕು. ಮುಖ್ಯವಾಗಿ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ತಮ್ಮಲ್ಲಿರುವ ದೌರ್ಬಲ್ಯಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಿ. ಇಂಗ್ಲೀಷ್ ಕಷ್ಟ ಎನಿಸಿದರೂ ಪ್ರತೀದಿನ ಇಂಗ್ಲೀಷ್ ಜರ್ನಲ್ ಗಳನ್ನು ಓದಲು ಶುರು ಮಾಡಿ ಹಾಗೂ ಕ್ರಿಕೆಟ್ ಕಾಮೆಂಟರಿಗಳನ್ನು ಕೇಳುತ್ತಿದ್ದರೆ ಕೋರ್ಸ್ ಮುಗಿಸುವ ವೇಳೆಗೆ ಇಂಗ್ಲೀಷ್ ಕಲಿಯಲು ಸಾಧ್ಯವಿದೆ. ಅತೀ ಹೆಚ್ಚು ಪ್ರಶಸ್ತಿಗಳು ಇಂಗ್ಲೀಷೇತರ ದೇಶಗಳ ಇಂಗ್ಲೀಷ್ ಸಾಹಿತ್ಯಕ್ಕೆ ದೊರಕುತ್ತಿದೆ ಎಂದರು.
ಯಾವುದೇ ಕೆಲಸ, ಅಧ್ಯಯನಕ್ಕೂ ಮುನ್ನ ಯೋಜನೆ ರೂಪಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಬೇಕು. ಸಮಯ ನಿರ್ವಹಣೆ ಜೊತೆಗೆ ಡೈರಿ ಬರೆಯುವುದನ್ನು ರೂಢಿಸಿಕೊಳ್ಳಿ. ಇದರಿಂದ ನಮ್ಮಲ್ಲಿರುವ ಮೂಲಭೂತ, ಅಸ್ತಿತ್ವದ ಪ್ರಶ್ನೆಗಳಿಗೆ ಮುಖಾಮುಖಿಯಾಗಲು ಸಾಧ್ಯವಾಗುತ್ತದೆ. ವಕೀಲರೆಂದರೆ ಕಲ್ಲನ್ನೂ ತಟ್ಟಿ ಮಾತನಾಡಿಸುವ ವಾಕ್ ಚಾತುರ್ಯ ಹೊಂದಿರಬೇಕು, ವಾಚಾಳಿತನವಲ್ಲ. ಕಾರ್ಪೋರೇಟ್ ಕ್ಷೇತ್ರದಲ್ಲಿ ನಾಯಕತ್ವ ಗುಣ ಮತ್ತು ಟೀಮ್ ಸ್ಪಿರಿಟ್ ತುಂಬುವ ಶಕ್ತಿಬೇಕು. ಆ ಕ್ವಾಲಿಟಿಯನ್ನು ಕಾಲೇಜು ಹಂತದಲ್ಲೇ ಗಳಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವಸಂತನರಸಾಪುರ ಬಗಾಡಿಯಾ ಚೈತ್ರ ಇಂಡಸ್ಟ್ರೀಸ್ ಪ್ರೈ.ಲಿ., ವಿಭಾಗದ ಮುಖ್ಯಸ್ಥ ರವಿಕುಮಾರ್ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್ ಎಸ್. ಮಾತಮಾಡಿ, ನಮ್ಮ ವಿದ್ಯಾರ್ಥಿಗಳು ಪ್ರತೀ ಹಂತಗಳಲ್ಲೂ ಯಶಸ್ಸು ಕಾಣಬೇಕು. ಇದಕ್ಕೆ ಬದ್ಧತೆ, ಕಠಿಣ ಪರಿಶ್ರಮ ಹಾಗೂ ಉತ್ಸಾಹ ಅಗತ್ಯವಾಗಿದೆ. ಕಾರ್ಪೋರೇಟ್ ಕಂಪನಿಗಳ ಆಯ್ಕೆಗೆ ಪೂರಕವಾಗಿ ಕಾಲೇಜಿನಲ್ಲೇ ಅನುಭವ ಪಡೆಯಬೇಕು. ಅಗಾಧ ಅಧ್ಯಯನದಿಂದ ಗುರಿ ತಲುಪಬಹುದು. ಕಾನೂನು ಕ್ಷೇತ್ರದಲ್ಲೂ ಕೌಶಲ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಒಂದು ವಸ್ತುವಿಗೆ ಬೇಡಿಕೆ ಹೆಚ್ಚಾದಾಗ ಅದರ ಬೆಲೆಯೂ ಏರಿಕೆಯಾಗುತ್ತದೆ. ಹಾಗೆಯೇ ನಮ್ಮ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಮಕ್ಕಳಿಗೆ ಕಾನೂನು ಕ್ಷೇತ್ರದ ಸವಿಸ್ತಾರವನ್ನು ಅರ್ಥಮಾಡಿಸುವ ಉದ್ದೇಶದಿಂದ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.
ವಿಚಾರ ಸಂಕಿರಣದಲ್ಲಿ ಸುಫಿಯ ಕಾನೂನು ಕಾಲೇಜಿನ ಲೀಗಲ್ ಸರ್ವೀಸಸ್ ಕ್ಲಿನಿಕ್‌ನ ಸಂಯೋಜನಾಧಿಕಾರಿ ಟಿ.ಓಬಯ್ಯ, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕ ಖಾಷೀಪ್ ಅಹಮದ್, ರಾ.ಸೇ.ಯೋ ಘಟಕದ ಸಂಚಾಲಕಿ ಮಮತಾ ಪಿ.ಎಲ್., ಯುವ ರೆಡ್ ಕ್ರಾಸ್ ಘಟಕದ ಸಂಚಾಲಕಿ ರೇಣುಕಾ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.