ತುಮಕೂರು: ಒಳಮೀಸಲಾತಿ ಜಾರಿ ಕುರಿತು ಚಳಿಗಾಲದ ಅಧಿವೇಶನದಲ್ಲಿ ಮಾತನಾಡಬೇಕು ಎಂದು ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟದವತಿಯಿಂದ ಸಚಿವರಾದ ಕೆ.ಎನ್.ರಾಜಣ್ಣ, ಡಾ.ಜಿ.ಪರಮೇಶ್ವರ್, ಶಾಸಕರಾದ ಜೋತಿಗಣೇಶ್, ಆರ್.ರಾಜೇಂದ್ರ ಅವರುಗಳಿಗೆ ಮನವಿ ಸಲ್ಲಿಸಲಾಯಿತು.
ಸುಪ್ರಿಂಕೋರ್ಟಿನ 7 ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವು ಒಳಮೀಸಲಾತಿ ಜಾರಿ ಕುರಿತಂತೆ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಿದ್ದು, ಒಳಮೀಸಲಾತಿ ಜಾರಿಯಾದರೆ ಪರಿಶಿಷ್ಟ ಜಾತಿಯಲ್ಲಿನ ಎಲ್ಲಾ 101 ಜಾತಿಗಳಿಗೂ ಸಾಮಾಜಿಕ ನ್ಯಾಯ ದೊರಕಿದಂತಾಗುತ್ತದೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಸುಪ್ರಿಂಕೋರ್ಟಿನ ತೀರ್ಪು ಬಂದ ನಂತರ ಅಧಿಕಾರಕ್ಕೆ ಬಂದ ಹರಿಯಾಣದ ಬಿಜೆಪಿ ಸರಕಾರ ತಾನು ಅಧಿಕಾರ ವಹಿಸಿಕೊಂಡ ಒಂದೇ ವಾರದಲ್ಲಿ ಸುಪ್ರಿಂಕೋರ್ಟಿನ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಿದೆ. ಆದರೆ ಕರ್ನಾಟಕದಲ್ಲಿ ತಾವು ಅಧಿಕಾರಕ್ಕೆ ಬಂದರೆ 60 ದಿನದಲ್ಲಿ ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 1 ವರ್ಷ 10 ತಿಂಗಳು ಕಳೆದರೂ ಒಳಮೀಸಲಾತಿ ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದೆ. ಅಲ್ಲದೆ ಕರಾರುವಾಕಾದ ಜನಸಂಖ್ಯೆಯ ಅಂಕಿ ಅಂಶ ಪಡೆಯಲು ರಚಿಸಿರುವ ನ್ಯಾ.ನಾಗಮೋಹನ್ದಾಸ್ ನೇತೃತ್ವದ ಸಮಿತಿಗೂ ಸರಿಯಾದ ರೀತಿ ಸ್ಪಂದಿಸದೆ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದೆ. ಹಾಗಾಗಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿ ಕುರಿತು ತಾವುಗಳು ಸರಕಾರದ ಗಮನ ಸೆಳೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಮಾದಿಗ ಸಂಘಟನೆಗಳ ಒಕ್ಕೂಟದ ಮುಖಂಡರಾದ ಸೋರೆಕುಂಟೆ ಯೋಗೀಶ್, ಪಿ.ಎನ್.ರಾಮಯ್ಯ, ಆನಂದ, ಬಿ.ಜಿ.ಸಾಗರ್, ಲಕ್ಷ್ಮಿದೇವಮ್ಮ, ಆಟೋ ಶಿವರಾಜು, ಕವಣದಾಲ ಶಿವಣ್ಣ, ನರಸಿಂಹರಾಜು, ಆಶಾ, ಅಂಜನಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.