ತುಮಕೂರು: ಲೇಖಕ, ವಿಮರ್ಶಕ ಡಾ.ರವಿಕುಮಾರ್ ನೀಹ ಅವರ ‘ಅವು ಅಂಗೇ’ ಕಥಾ ಸಂಕಲನದಲ್ಲಿರುವ ಕಥೆಗಳು ಅಂಚಿನ ಸಮುದಾಯಗಳ ಧ್ವನಿಯಾಗಿವೆ ಎಂದು ಚಿಂತಕಿ ಡಾ.ಭಾರತಿದೇವಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಜಲಜಂಬೂ ಲಿಂಕ್ಸ್, ತುಮಕೂರು, ಅರುಣೋದಯ ಸಹಕಾರ ಸಂಘ(ರಿ), ಜಿಲ್ಲಾ ಕಸಾಪ, ತುಮಕೂರು, ಕರ್ನಾಟಕ ಲೇಖಕಿಯರ ಸಂಘ(ರಿ), ತುಮಕೂರು ಅಲೇಖ್ಯ ಎಂಟರ್‌ಪ್ರೆಸಸ್, ತುಮಕೂರು ಇವರು ಆಯೋಜಿಸಿಸದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ವಿಮರ್ಶಕ ಡಾ.ರವಿಕುಮಾರ್ ನೀಹ ಅವರ ‘ಅವು ಅಂಗೇ’ ಕಥಾ ಸಂಕಲನ ಲೋಕಾರ್ಪಣೆ ಹಾಗೂ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅವು ಅಂಗೇ ಕಥಾ ಸಂಕಲನದಲ್ಲಿರುವ ಬಹುತೇಕ ಕಥೆಗಳು, ಅವರ ಸಂಶೋಧನಾ ಕೃತಿಗಳಾದ ಕುರನ್ಗರಾಯ, ಜಲಂಜಂಭೂ ಕನ್ಯ, ಕಣ್ಣು ಧರಿಸಿ ಕಾಣಿರೋ ಇವುಗಳ ಮುಂದುವರೆದ ಭಾಗಗಳಂತೆ ಕಂಡು ಬರುತ್ತಿದ್ದು, ಸಮುದಾಯದ ಧ್ವನಿಯನ್ನು ಬಿತ್ತಿರಿಸುತ್ತಿದೆ. ಸಾಂಸ್ಕೃತಿಕ ರಾಜಕಾರಣದಿಂದ ಕಣ್ಮೆರೆಯಾದ ನೆಲಮೂಲದ ಸಂಸ್ಕೃತಿಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ ಎಂದರು.
ಡಾ.ರವಿಕುಮಾರ್ ನೀಹ ಅವರ ಪ್ರತಿ ಕಥೆಯಲ್ಲಿಯೂ ತಾರತಮ್ಯ ಮುಕ್ತ ಸಮಾಜದ ಕನಸು ಇರುವುದನ್ನು ಕಾಣಬಹುದು. ಯಾತನೆ, ನೋವಿನಿಂದ ಕೂಡಿದ ಭೂತ ಕಾಲವನ್ನು ವರ್ತಮಾನದಲ್ಲಿ ಎದುರುಗೊಳ್ಳುವ ಪ್ರಯತ್ನ ಇದಾಗಿದೆ. ಪುರುಷ ಪ್ರಧಾನ ಅಂಶಗಳನ್ನು ಇಟ್ಟುಕೊಂಡೆ ಸ್ತ್ರೀ ಪಾತ್ರಗಳಿಗೆ ಹೆಚ್ಚು ಘನತೆ ತಂದುಕೊಡಲಾಗಿದೆ. ನೆಲಮೂಲದ ಭಾಷೆ, ಅಲ್ಲಿನ ಪರಿಸರ ಎಲ್ಲವೂ ಕೂಡ ಕಥೆಯನ್ನು ಓದಿಸಿಕೊಂಡು ಹೋಗುವ ಶಕ್ತಿ ಹೊಂದಿವೆ. ನಮ್ಮಿಂದಲೇ ಹುಟ್ಟಿಕೊಂಡ ಕಥೆಗಳೇ ನಮ್ಮನ್ನು ಆಪೋಷಣೆ ತೆಗೆದುಕೊಳ್ಳುತ್ತಿರುವಾಗ ಅದರಿಂದ ಹೇಗೆ ಹೊರಬರಬಹುದು ಎಂಬುದನ್ನು ತಮ್ಮ ಕಥೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಡಾ.ಭಾರತೀ ದೇವಿ ನುಡಿದರು.
ಲೇಖಕರಾದ ಡಾ.ಹರೀಶ್ ಗಂಗಾಧರ್ ಮಾತನಾಡಿ, ಅವು ಅಂಗೇ ಕಥಾ ಸಂಕಲನದಲ್ಲಿರುವ ಎಲ್ಲಾ ಕಥೆಗಳು ಓದುಗರ ಅನುಭವಕ್ಕೆ ತಕ್ಕಂತೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಪವಿತ್ರ, ಅಪವಿತ್ರದ ನಡುವಿನ ಗೋಡೆಗಳನ್ನು ಒಡೆದು ಹಾಕುವ ಪ್ರಯತ್ನವನ್ನು ನೀಹ ಅವರು ಮಾಡಿದ್ದಾರೆ. ಹವಾಮಾನದ ಬರಗಾಲಕ್ಕಿಂತ ಮನುಷ್ಯನ ಆಂತರ್ಯದಲ್ಲಿರುವ ಬರಗಾಲವನ್ನು ತೆಡೆದು ಹಾಕುವ ಕಥೆಗಳಾಗಿವೆ. ಅತ್ಯಾಚಾರ, ದಬ್ಬಾಳಿಕೆ, ದೌರ್ಜನ್ಯ, ಕೊಲೆ, ಸುಲಿಗೆಗಳ ಸಮರ್ಥನೆಗೆ ಕಥೆಗಳು ಹುಟ್ಟಿಕೊಳ್ಳುತ್ತಿರುವ ಈ ಕಾಲದಲ್ಲಿ ಸಮಾಜದ ಕೆಡುಕುಗಳನ್ನು ತೊಡೆದು ಹಾಕಲು ಕಥೆಗಳನ್ನು ರಚಿಸಲಾಗಿದೆ. ಪ್ರತಿರೋಧದ ನೆಲೆಯಲ್ಲಿ ಕಥೆಗಳಿದ್ದು, ಸಾಮಾಜಿಕ ಕಳಕಳಿಯನ್ನು ಹೊಂದಿವೆ ಎಂದರು.
ಅವು ಅಂಗೇ ಕಥಾ ಸಂಕಲನ ಬಿಡುಗಡೆ ಮಾಡಿದ ಕಥೆಗಾರತಿ ಬಿ.ಟಿ.ಜ್ಞಾಹ್ನವಿ ಮಾತನಾಡಿ, ವಿಮರ್ಶಕರಾಗಿದ್ದ ಡಾ.ರವಿಕುಮಾರ್ ನೀ.ಹ. ಕಥೆಗಾರರಾಗಿ ಪರಿಚಯವಾಗುತ್ತಿದ್ದು, ಅವರಿಂದ ಮತ್ತಷ್ಟು ಸೃಜನಾತ್ಮಕ ಕಥೆಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ತುಂಬಾಡಿ ರಾಮಯ್ಯ ಮಾತನಾಡಿದರು.
ವಿಮರ್ಶಕ, ಕಥೆಗಾರ, ಅವು ಅಂಗೇ ಕಥಾ ಸಂಕಲನದ ಕರ್ತೃ ಡಾ.ರವಿಕುಮಾರ್ ನೀಹ ಮಾತನಾಡಿ, 23ವರ್ಷಗಳ ಹಿಂದೆ ಒಂದು ಕಥೆಯನ್ನು ಬರೆದು, ವಿಮರ್ಶೆಯತ್ತ ಹೊರಳಿದ್ದು, ಟಿಪ್ಪುಸುಲ್ತಾನ್‌ನ ಕುರಿತು ಕಾದಂಬರಿಯೊಂದು ಸಿದ್ದಗೊಳ್ಳುತ್ತಿರುವ ಹೊತ್ತಿನಲ್ಲಿ ಅದಕ್ಕೊಂದು ಪೀಠಿಕೆ ಎಂಬಂತೆ 2023ರಲ್ಲಿ ಸುಮಾರು 08 ಕಥೆಗಳನ್ನು ರಚಿಸಿದ್ದು, ಕಥೆಯಲ್ಲಿರುವ ಎಲ್ಲಾ ಪಾತ್ರಗಳು ಜೀವಂತವಾಗಿವೆ, ಇವು ಕಾಲ್ಪನಿಕವಲ್ಲ. ನೆಲಮೂಲ ಭಾಷೆಗಾಗಿ ಕೇರಿ, ಹಟ್ಟಿಗಳನ್ನು ಓಡಾಡಿದ್ದೇನೆ. ಕಥೆಗಳು ಹೆಚ್ಚು ಓದಿಸಿಕೊಳ್ಳುವ ಮೂಲಕ ನೆಲಮೂಲದ ಭಾಷೆ ಗೆದಿದ್ದೆ ಎಂದರು.
ಅವು ಅಂಗೇ ಕಥಾ ಸಂಕಲನ ಕುರಿತು ಉದ್ಯೋನ್ಮುಖ ಕವಿ ನವೀನ್ ಪೂಜಾರಳ್ಳಿ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು,ಡಾ.ಮೂರ್ತಿ ತಿಮ್ಮನಹಳ್ಳಿ ಮಾತನಾಡಿದರು.
ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಡಾ.ಮುಕುಂದ್, ಡಾ.ಹನುಮಂತರಾಯಪ್ಪ ಪಾಲಸಂದ್ರ, ಗುರುಪ್ರಸಾದ್ ಕಂಟಲಗೆರೆ, ಕಾಂತರಾಜ್ ಗುಪ್ಪಟ್ಣ, ಮೋದೂರು ತೇಜು, ಆಶಾರಾಣಿ, ಪಾವರ್ತಿ.ಎಚ್.ಅವರುಗಳು ಉಪಸ್ಥಿತರಿದ್ದರು.