ಅಕ್ರಮಕ್ಕೆ ಅಧಿಕಾರಿಗಳ ಸಕ್ರಮದ ಸಾಥ್ ಇದೆಯೇ?
ತಿಪಟೂರು: ತಾಲೂಕು ಹೊನ್ನವಳ್ಳಿ ಹೋಬಳಿ, ಗ್ಯಾರಘಟ್ಟ ಗ್ರಾಪಂ ವ್ಯಾಪ್ತಿಯ ಸೂರನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಅಂಗನವಾಡಿ ಕೇಂದ್ರದ ಎದುರು ಇರುವ ಚಿಲ್ಲರೆ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ದೂರು ಕೇಳಿ ಬರುತ್ತಿದ್ದು, ಗ್ರಾಪಂ ಸದಸ್ಯ ಜಯಣ್ಣ ಎಂಬುವವರು ತಮ್ಮ ರಾಜಕೀಯ ಪ್ರಭಾವ ಬಳಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಮುಖ್ಯವಾಗಿ ಇದಕ್ಕೆ 18 ವರ್ಷದ ಒಳಗಿನ ಮಕ್ಕಳೇ ಗುರಿಯಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಿಗ್ಗೆ ಹಾಗೂ ಸಂಜೆಯಾದರೆ ಸೂರನಹಳ್ಳಿ ‘ಸುರಪಾನ’ ಗ್ರಾಮವಾಗಿ ಮಾರ್ಪಾಡಾಗುತ್ತಿದೆ. ಹೆಂಗಸರು ಮತ್ತು ಮಕ್ಕಳು ಓಡಾಡುವುದೇ ದುಸ್ತರವಾಗಿದೆ. ಮದ್ಯ ಮಾರಾಟ ಮಾಡುತ್ತಿರುವುದರಿಂದ ಯುವ ಜನರು ಕೂಡ ಹಾದಿ ತಪ್ಪುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಹೊನ್ನವಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೂ.. ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮಹಿಳೆಯರು ದೂರುತ್ತಿದ್ದಾರೆ.
ಅಬಕಾರಿ ಇಲಾಖೆಯವರು ಹಾಗೂ ಪೊಲೀಸರು ಮದ್ಯ ಮಾರಾಟ ಮಾಡುತ್ತಿರುವ ಚಿಲ್ಲರೆ ಅಂಗಡಿ ಮಾಲೀಕ ಅಂದರೆ ಗ್ರಾಮ ಪಂಚಾಯ್ತಿ ಸದಸ್ಯ ಜಯಣ್ಣನೊಂದಿಗೆ ಶಾಮೀಲಾಗಿದ್ದಾರೆ ಎಂಬ ಆರೋಪವಿದ್ದು, ಪೊಲೀಸರೂ ಇವರೊಂದಿಗೆ ಸಾಥ್ ನೀಡುತ್ತಿದ್ದಾರೆ. ಇಲಾಖೆಯವರು ದಾಳಿ ಮಾಡುವ ಸಂದರ್ಭದಲ್ಲಿ ಆತನಿಗೆ ಮಾಹಿತಿ ನೀಡಿ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮದ ಹಿರಿಯರೊಬ್ಬರು ತಿಳಿಸಿದರು.
ಅಂಗನವಾಡಿ ಹಾಗೂ ಶಾಲಾ ಕಾಲೇಜಿನ 100 ಮೀಟರ್ ಅಂತರದಲ್ಲಿ ತಂಬಾಕು, ಮದ್ಯ ಮಾರಾಟ ಮಾಡುವುದು ನಿಷಿದ್ಧವಿದ್ದರೂ ನಿತ್ಯ ಕಾನೂನನ್ನು ಉಲ್ಲಂಘಿಸುತ್ತಲೇ ಇದ್ದಾರೆ. ತಂಬಾಕು ಮತ್ತು ಮದ್ಯದ ಪಾಕೇಟ್ ಗಳನ್ನು ಶಾಲೆಯ ಆವರಣದ ಸುತ್ತಲೂ ಎಸೆಯಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದರು.
ಊರಿಗೆ ಮಾರಿಯಾಗಬೇಕಿದ್ದ ಹಾಗೂ ಜನ ಸೇವೆ ಮಾಡಬೇಕಿದ್ದ ಜನಪ್ರತಿನಿಧಿಯೊಬ್ಬರು ಜನರಿಗೆ ಹೆಂಡ ಕುಡಿಸಿ `ಮದ್ಯ ಸೇವೆ’ ಮಾಡುವ ಮೂಲಕ ಗ್ರಾಮದ ನೈತಿಕ ಮಟ್ಟವನ್ನು ಕೆಡಿಸುತ್ತಿದ್ದಾರೆ. ಜನಪ್ರತಿನಿಧಿಯೊಬ್ಬರು ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು ನೀತಿಯಲ್ಲ. ಸಂಬಂಧ ಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.