ತುಮಕೂರು: ಜೆಡಿಎಸ್ ಮುಖಂಡನೋರ್ವ ವರದಿಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೊರಟಗೆರೆ ತಾಲೂಕಿನ ದಾಸಲು ಕುಂಟೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ತಾಲೂಕಿನ ಕುರಂಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ನರೇಗಾ ಯೋಜನೆಯಡಿಯ ಬಾಕ್ಸ್ ಚರಂಡಿ ಕಾಮಗಾರಿಯನ್ನು ಜೆಸಿಬಿ ಬಳಸಿ ಮಾಡಲಾಗುತ್ತಿದೆ. ಅಲ್ಲದೆ ಕಳಪೆ ಗುಣಮಟ್ಟದ ಚರಂಡಿ ನಿರ್ಮಾಣ ಕುರಿತು ವರದಿಯೊಂದರ ಪ್ರೋಮೋ ಬಿಡಲಾಗಿತ್ತು. ಈ ಹಿನ್ನೆಲೆ `ನ್ಯಾಯಘರ್ಜನೆ2’ ವೆಬ್ ವರದಿಗಾರ ಮುದ್ದುರಾಜು ಡಿ.ಆರ್ ಅವರನ್ನು ಗುರಿಯಾಗಿಸಿ ಶನಿವಾರ ರಾತ್ರಿ 7.30ರ ವೇಳೆಗೆ ಕುರಂಕೋಟೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಮತ್ತು ಹಾಲಿ ಸದಸ್ಯೆ ಮಹಾದೇವಮ್ಮ ಹಾಗೂ ಪತಿ ಜೆಡಿಎಸ್ ಬೆಂಬಲಿತ ರಂಗರಾಜು ಮತ್ತು ಇತರರು ರಾತ್ರಿ ವೇಳೆ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಜೊತೆಗೆ ಕೊಲೆ ಪ್ರಯತ್ನ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವರದಿಗಾರ ಮುದ್ದುರಾಜು ಮತ್ತು ಪತ್ನಿ ಸೌಭಾಗ್ಯಮ್ಮ ಅವರು ವಿಡಿಯೋ ಸಮೇತ ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.