ಪ್ರಜಾಪ್ರಭುತ್ವದ ರಾಜರೇ? ಸಚಿವ ಡಾ.ಜಿ.ಪರಮೇಶ್ವರ!

ತುಮಕೂರು: ತುಮಕೂರಿನಲ್ಲಿ ನಡೆಸಿದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ರಾಜಪ್ರಭುತ್ವವನ್ನು ನೆನಪಿಸಿತು. ಜಿಲ್ಲಾ ಉಸ್ತುವಾರಿ ಸಚಿವರು ಅಂಬಾರಿ ಏರಿದ ರಾಜನಂತೆ ಕಂಡು ಬಂದರು.

ರಾಜನೋರ್ವ ಅಂಬಾರಿ ಮೇಲೆ ತೆರಳುತ್ತಿದ್ದರೆ ಪ್ರಜೆಗಳೆಲ್ಲರೂ ರಸ್ತೆ ಬದಿಯಲ್ಲಿ ನಿಂತು ಜಯಘೋಷಗಳನ್ನು ಕೂಗುವಂತೆ, ರಾಜನು ಅಂಬಾರಿ ಏರಿ ಬಡ ಪ್ರಜೆಗಳೆಲ್ಲರತ್ತ ಕೈ ಬೀಸಿ ಸಾಗುತ್ತಿದ್ದ ದೃಶ್ಯ ಮಾನವ ಸರಪಳಿಯಲ್ಲಿ ಮರುಕಳಿಸಿತು.

ಶಿರಾ ತಾಲೂಕಿನ ತಾವರೆಕೆಯಿಂದ ಪ್ರಾರಂಭವಾದ ಪ್ರಜಾಪ್ರಭುತ್ವ ದಿನಾಚರಣೆ ಮಾನವ ಸರಪಳಿಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರು ಸುಮಾರು 17 ಅಡಿ ಎತ್ತರದ ಅಂಬಾರಿ ಬಸ್ ಏರಿ ಕೈ ಬೀಸುತ್ತದ್ದದ್ದು ಮಾತ್ರ ಒಂದು ಕ್ಷಣ ಪ್ರಜಾಪ್ರಭುತ್ವ ದೇಶದಲ್ಲಿ ಇದೆಂತಹ ನಡವಳಿಕೆ ಎಂಬ ಗೊಂದಲ ಉಂಟುಮಾಡಿತು.

ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎನಿಸಿಕೊಂಡಿರುವ ಭಾರತದಲ್ಲಿ ಆಚರಿಸಲಾಗುತ್ತಿರುವ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಚರಣೆ ಭಾರತಕ್ಕೆ ಅನಿವಾರ್ಯವಾಗಿತ್ತು. ಸರ್ವಾಧಿಕಾರಿಗಳ ಆಡಳಿತದ ಅವಧಿಯಲ್ಲಿ ಪ್ರಜಾಪ್ರಭುತ್ವದ ಆಶಯಗಳು ಅಪಾಯದಲ್ಲಿರುವಾಗ ಸಮಾನತೆ, ಬ್ರಾತೃತ್ವ ಸಾರಲು ಮಾನವ ಸರಪಳಿ ಉತ್ತಮ ಸಂದೇಶ ವಾಹಕ. ಈ ಸಂದರ್ಭದಲ್ಲಿ ಗೃಹ ಸಚಿವರ ನಡವಳಿಕೆಯಿಂದ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತಿದೆ ಎಂದು ಭಾಸವಾಗಿದ್ದಲ್ಲದೆ, ಈ ಕಾರ್ಯಕ್ರಮವನ್ನು ಸ್ವಂತ ಪ್ರಚಾರಕ್ಕೆ ಬಳಸಿಕೊಂಡಂತೆ ಕಂಡು ಬಂತು. ಉದ್ದೇಶ ಒಳ್ಳೆಯದಾಗಿದ್ದರೂ ಅನುಷ್ಠಾನ ಗೊಳಿಸುವ ಪರಿ ಸ್ವೀಕಾರಾರ್ಹವಾಗಿರಲಿಲ್ಲ. ಜನ ಪ್ರತಿನಿಧಿಗಳು 90 ಕಿ.ಮೀ ನಡೆಯಲು ಸಾಧ್ಯವಿಲ್ಲ, ಸರಿ. ಆದರೆ, ಜನರೊಂದಿಗೆ ಬೆರೆಯದೆ ರಾಜನಂತೆ (ಇಂದಿನ ಪ್ರಧಾನ ಮಂತ್ರಿಗಳಂತೆ) ಅಂಬಾರಿ ಏರಿ ಹೊರಟರೆ ಡೆಮಾಕ್ರಸಿಗೆ ಅರ್ಥವಿಲ್ಲ. ಇರಲಿ ಇದು ಉದ್ದೇಶ ಪೂರಿತ ತಪ್ಪಲ್ಲವೆಂದು ಮೇಲ್ನೋಟಕ್ಕೆ ಕಾಣಿಸುತ್ತಿದ್ದರಿಂದ ಮಾಫಿಗೆ ಅರ್ಹವಾದದು. ಇದು ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳಿಗೆ ಮಾತ್ರ ಸೀಮಿತವಾಗದೆ ಕಾರ್ಯಕ್ರಮ ರೂಪಿಸಿದ ರಾಜ್ಯ ಸರ್ಕಾರಕ್ಕೆ ಮನವರಿಕೆಯಾಗಬೇಕಿತ್ತು.

ಎಎಸ್ಪಿ ಖಾದರ್‌ ಅನುಚಿತ ವರ್ತನೆ: ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯುವ ವೇಳೆ ಎಎಸ್ಪಿ ಖಾದರ್ ಅವರು ಪತ್ರಕರ್ತರೊಂದಿಗೆ ಅನುಚಿತವಾಗಿ ನಡೆದುಕೊಂಡ ಘಟನೆ ನಡೆಯಿತು. ಪತ್ರಕರ್ತರ ಪ್ರಯಾಣಕ್ಕಾಗಿ ವಾರ್ತಾ ಇಲಾಖೆಯಿಂದ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಉಪಹಾರ ಸೇವಿಸಲು ಉಜ್ಜನಕುಂಟೆ ಬಳಿ ಟೆಂಪೋ ಟ್ರಾವೆಲರ್ ಅನ್ನು ಪಾರ್ಕಿಂಗ್ ಮಾಡುವ ವೇಳೆ ಎಎಸ್ಪಿ ಖಾದರ್ ಅವರು, ವಾಹನ ನಿಲ್ಲಿಸದಂತೆ ಸೂಚಿಸಿದ್ದಾರೆ. ತಿಂಡಿ ಸೇವಿಸಿದ ನಂತರ ವಾಹನ ತೆಗೆದುಕೊಳ್ಳುವುದಾಗಿ ಮನವಿ ಮಾಡಿಕೊಂಡರೂ ಕೇಳದ ಅವರು, ಪತ್ರಕರ್ತರನ್ನು ಗೌರವಿಸದೆ `ನೀ ಯಾವನಾದ್ರೆ ಏನು? ಗಾಡಿ ತೆಗಿಯೋ ಮೊದಲು. ನನ್ನ ಹತ್ತಿರ ಇವೆಲ್ಲ ಬೇಡ’ ಎಂದು ಲೂಸ್ ಟಾಕ್ ಮಾಡಿದರು. ನಂತರ ಎಸ್ಪಿ ಅಶೋಕ್ ಕೆ.ವಿ ಅವರು ಸ್ಥಳಕ್ಕೆ ಧಾವಿಸಿ ಖಾದರ್ ಅವರಿಗೆ ತಿಳುವಳಿಕೆ ಮೂಡಿಸಿದರು.

ಪ್ರಜಾಪ್ರಭುತ್ವದ ದಿನದಂದು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮದವರನ್ನೇ ಗೌರವಿಸದಿದ್ದರೆ ಇನ್ನು ಜಿಲ್ಲೆಯ ನಾಗರಿಕರೊಂದಿಗೆ ಹೇಗೆ ವರ್ತಿಸಬಹುದು ಎಂಬುದನ್ನು ಊಹಿಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕಟ್ಟಲು ಶ್ರಮಿಸುತ್ತಿದ್ದರೆ, ಈ ಯೋಜನೆಗೆ ಅಧೀನ ಅಧಿಕಾರಿಗಳೇ ಭಂಗ ಉಂಟು ತರುತ್ತಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಮಕ್ಕಳ ಅಸುರಕ್ಷತ ಪ್ರಯಾಣ: ಮಾನವ ಸರಪಳಿಯಲ್ಲಿ ನಾನಾ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಖಾಸಗೀ ಶಾಲೆಯ ಮಕ್ಕಳು ಸುವ್ಯವಸ್ಥಿತವಾದ ಶಾಲಾ ಬಸ್ ನಲ್ಲಿ ಬಂದಿಳಿದರೆ, ಸರ್ಕಾರಿ ಶಾಲಾ ಮಕ್ಕಳು ಸಾಮಾನು ಸರಂಜಾಮು ಸಾಗಿಸುವ ಟಾಟಾ ಏಸ್ ಗಳಲ್ಲಿ ಬಂದಿಳಿದರು. ಸರ್ಕಾರಿ ಶಾಲಾ ಮಕ್ಕಳ ಜೀವಕ್ಕೆ ಬೆಲೆ ಇಲ್ಲದಿರುವುದು ಈ ಚಿತ್ರ ನಿರೂಪಿಸಿದಂತಿತ್ತು. ಟಾಟ ಏಸಸ್ ವಾಹನದಲ್ಲಿ ಸಾಗುತ್ತಿರುವ ಮಕ್ಕಳು ಯಾವುದೇ ರಕ್ಷಣೆ ಇಲ್ಲದೆ ನಿಂತಿದ್ದರು. ಅದೃಷ್ಟವಶಾತ್‌ ಯಾವುದೇ ಅಪಘಾತ ಸಂಭವಿಸಿಲ್ಲ. ಒಂದು ವೇಳೆ ದುರ್ಘಟನೆ ನಡೆದಿದ್ದರೆ ಪರಿಸ್ಥಿತಿ ಏನಾಗಬೇಕಿತ್ತು. ದೇಶದ ಮುತ್ತು ರತ್ನಗಳಂತಿರುವ ಮಕ್ಕಳ ಜೀವಕ್ಕೆ ಹಾನಿಯಾದರೆ ಬೆಲೆ ಕಟ್ಟಲಾದೀತೆ? ಪೋಷಕರಿಗೆ ಉತ್ತರ ನೀಡುವವರು ಯಾರ? ಅಧಿಕಾರಿಗಳು, ಜನಪ್ರತಿನಿಧಿಗಳ ಶೋಕಾಚರಣೆ ಪರಿಹಾರವಾದೀತೇ? ಈ ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಇಲಾಖೆ ‌ದಂಡ ತೆರಲೇಬೇಕು.

ಈ ಸಣ್ಣಾಪುಟ್ಟುದ್ದೆಲ್ಲ ಯಾರು ಕೇಳೋಕೆ ಹೋಗ್ತಾರೆ ಈ.. ಗೂಡ್ಸಲ್ಲಿ ಬರ್ತಾರೆ, ಜಟ್ಕಾದಲ್ಲಿ ಬರ್ತಾರೆ, ಎತ್ತಿನಗಾಡಿಯಲ್ಲಿ ಬರ್ತಾರೆ. ಹೆಂಗಾದ್ರರು ಬರಲಿ ಬಿಡಿ ಎಂದು ಗೃಹ ಸಚಿವರು ಪತ್ರಕರ್ತರ ಪ್ರಶ್ನೆಗೆ ಬೇಜವಾಬ್ದಾರಿತನದ ಹೇಳಿಕೆ ನೀಡಿರುವುದು ಜನರಲ್ಲಿ ಆಘಾತ ಉಂಟು ಮಾಡಿರುವುದಂತೂ ಸುಳ್ಳಲ್ಲ. ಒಟ್ಟಾರೆ ತುಮಕೂರಿನಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯನ್ನು ವಯೋ ವೃದ್ಧರಿಂದ ಹಿಡಿದು ಮಹಿಳೆ, ಮಕ್ಕಳು ಶ್ರಮಿಕ ವರ್ಗ, ಸಮಾಜದ ನಾನಾ ಸ್ತರದವರು ಭಾಗವಹಿಸಿ ಯಶಸ್ವಿಗೊಳಿಸಿದರು.

ಇದೊಂದು ಯಶಸ್ವಿ ಕಾರ್ಯಕ್ರಮ. 90 ಕಿ.ಮೀ ನಡೆಯಲು ನಮಗೆ ಸಾಧ್ಯವಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚು ದೂರ ಕ್ರಮಿಸಬೇಕಾದ್ದರಿಂದ ವಾಹನ ಬಳಸಬೇಕಾಯಿತು ಎಂದು ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟನೆ ನೀಡಿದರು.


Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles