ಗುಬ್ಬಿ: ಪಟ್ಟಣದ ಹೊರ ವಲಯದ ಸಿಐಟಿ ಕಾಲೇಜು ಬಳಿ ಇರುವ ಬೇಕರಿ ಮಾಲೀಕ ಬಸವರಾಜು(೪೫) ಎಂಬ ವ್ಯಕ್ತಿ ಮೀಟರ್ ಬಡ್ಡಿ ಒತ್ತಡಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಈ ವ್ಯಕ್ತಿ ಮಾಡಿರುವ ವಿಡಿಯೋದಲ್ಲಿ ಮೀಟರ್ ಬಡ್ಡಿ ದಂಧೆ ಕಿರುಕುಳ ನೀಡುತ್ತಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ.
ಸಿಐಟಿ ಕಾಲೇಜು ಮುಂಭಾಗ ಬೇಕರಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ಬಸವರಾಜು ಚೆಕ್ ನೀಡಿ ಸಾಲ ಪಡೆದಿದ್ದ. ಮೀಟರ್ ಬಡ್ಡಿ ನೀಡುವಂತೆ ನಿತ್ಯ ಒತ್ತಡ ಹಾಕುತ್ತಿದ್ದ ಬಡ್ಡಿ ನಾಗ ಎಂಬುವವನ ಮೇಲೆ ನೇರ ಆರೋಪ ಮಾಡಿ, ತನ್ನ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿ ನಂತರ ಬೇಕರಿಯಲ್ಲೇ ಆತ್ಮಹತ್ಯೆ ಶರಣಾಗಿದ್ದಾನೆ.
ನಾನು ಎಲ್ಲ ಸಾಲ ಕೊಟ್ಟಿದ್ದೀನಿ. ಆದರೆ, ನಾನು ಕೊಟ್ಟಿದ್ದ ಚೆಕ್ ವಾಪಸ್ ಕೊಡದೆ ಬಡ್ಡಿ ನಾಗ ಹೆದರಿಸುತ್ತಿದ್ದಾನೆ. ತುಂಬಾ ರೌಡಿಸಂ ಮಾಡುತ್ತಿದ್ದಾನೆ. ನಂದಿನಿ ಪಾರ್ಲರ್ ನವನು ಓಡಿ ಹೋಗಲು ಇವನೇ ಕಾರಣ. ಯಾವುದೇ ಸಾಲ ಇಲ್ಲದಿದ್ದರೂ ತುಂಬಾ ಕಿರುಕುಳ ನೀಡುತ್ತಿದ್ದಾನೆ. ಎಷ್ಟೋ ಜನ ಇವನಿಂದ ಹೆದರಿ ಓಡಿ ಹೋಗಿದ್ದಾರೆ. ಈತನ ವಿರುದ್ಧ ಹಲವು ಬಾರಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ನೇಣಿಗೆ ಕೊರಳೊಡ್ಡಿದ್ದಾನೆ.