ಕಾಂಗ್ರೆಸ್-ಆಮ್‌ಆದ್ಮಿ ಜಗಳ | ಬಿಜೆಪಿಗೆ ಪುಷ್ಕಳ | ಸಂವಿಧಾನ ಪ್ರಿಯರ ಕಳವಳ
ನಾಗೇಂದ್ರ ಕುಮಾರ್ ಅದಲಗೆರೆ / ಹರೀಶ್ ಕಮ್ಮನಕೋಟೆ
ಸಂವಿಧಾನದ ಆಶಯಗಳಿಗೆ ಬದ್ಧರಾಗಿ ದೇಶ ಉಳಿಸುವ ಮಾತನಾಡುತ್ತಿದ್ದ ಇಂಡಿಯಾ ಒಕ್ಕೂಟದ ಅಂಗ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ರಾಷ್ಟ್ರೀಯ ಪಕ್ಷಗಳು ಒಣ ಪ್ರತಿಷ್ಠೆ ಹಾಗೂ ಅಸ್ತಿತ್ವದ ನೆಪವೊಡ್ಡಿ ತಮ್ಮ ಸಮಾನ ಶತ್ರು ಹಾಗೂ ಸಂವಿಧಾನ ವಿರೋಧಿ ಎಂದು ಘೋಷಿಸಿದ್ದ ಮತ್ತೊಂದು ರಾಷ್ಟ್ರೀಯ ಪಕ್ಷ ಬಿಜೆಪಿಗೆ ದೆಹಲಿ ಗದ್ದುಗೆಯನ್ನು ಅನಾಯಾಸವಾಗಿ ಅರ್ಪಿಸಿದ ಘಟನೆ ಆಘಾತಕಾರಿಯೇ ಸರಿ.
ಕೇಜ್ರಿವಾಲ್ ಸೋಲಿಗೆ ಸ್ವಪ್ರತಿಷ್ಠೆಯೇ ಕಾರಣವಾಯಿತೇ ಎಂಬ ಚರ್ಚೆ ಈಗ ಜನ್ಮ ತಾಳಿದೆ. ದೆಹಲಿಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದ್ದರೆ, ಮೂರು ಬಾರಿ ಅಧಿಕಾರಕ್ಕೆ ಬಂದ ಆಮ್ ಆದ್ಮಿಪಕ್ಷ ನಡ ಮುರಿದುಕೊಂಡು ಮೂಲೆ ಸೇರಿದೆ. ಬಿಜೆಪಿ ಗೆದ್ದು ಬೀಗುವ ಮೂಲಕ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸುವ ಮಾತನ್ನಾಡುತ್ತಿದೆ.
ಒಟ್ಟಾಗಿ ನಿಂತು ಸಂವಿಧಾನ ವಿರೋಧಿ ಎಂದೇ ಬಿಂಬಿಸುತ್ತಿದ್ದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಿದ್ದ ಪಕ್ಷಗಳು ಪರಸ್ಪರ ಕಚ್ಚಾಡುವ ಮೂಲಕ ಸಿಕ್ಕ ಅವಕಾಶವನ್ನು ಬಿಟ್ಟುಕೊಟ್ಟಿವೆ. ಒಂದೆಡೆ ಏಕಾಂಗಿಯಾಗಿ ಗೆಲುವು ಸಾಧಿಸುತ್ತೇವೆ ಎಂದು ಅತೀ ಹುಮ್ಮಸ್ಸಿನಿಂದ ಹೋಗಿದ್ದ ಆಪ್ ಪಾರ್ಟಿ ಸೋಲಿನ ರುಚಿ ಸವಿಯುತ್ತಿದ್ದರೆ, ತಮ್ಮನ್ನು ಧಿಕ್ಕರಿಸಿದ ಕಾರಣಕ್ಕೆ ಆಪ್‌ಗೆ ಈ ಗತಿ ಬಂದೊದಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡುತ್ತಿದೆ. ಇಲ್ಲಿ ನಿಜಕ್ಕೂ ಸೋತಿದ್ದು, ಕಾಂಗ್ರೆಸ್ ಅಥವಾ ಆಪ್ ಅಲ್ಲ, ಪ್ರಜಾಪ್ರಭುತ್ವ. ಸರ್ವಾಧಿಕಾರಿ ಧೋರಣೆಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸೋತಿದ್ದು ಸರಿ ಎಂಬ ಸಂವಿಧಾನ ಪ್ರಿಯರ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ, ಸಂವಿಧಾನ ವಿರೋಧಿ ಬಿಜೆಪಿ ಗೆದ್ದಿದ್ದು ಸರಿಯೇ ಎಂಬ ಪ್ರಶ್ನೆಗೆ ಉತ್ತರಗಳನ್ನು ಕಂಡುಕೊಳ್ಳಬೇಕಿದೆ.
ಕೇಂದ್ರ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ನಡೆಯನ್ನು ಸಂವಿಧಾನ ವಿರೋಧಿ, ಸರ್ವಾಧಿಕಾರಿ ಧೋರಣೆ ಎಂದೇ ಉದಾಹರಣೆ ಸಹಿತ ದೇಶದ ಜನತೆಗೆ ವಿವರಿಸುತ್ತಾ ಬಂದ ಇಂಡಿಯಾ ಒಕ್ಕೂಟದ ಈ ಎರಡೂ ರಾಷ್ಟ್ರೀಯ ಪಕ್ಷಗಳು ಸ್ವ-ಪ್ರತಿಷ್ಠಗೆ ಬಿದ್ದು, ದೇಶದ ರಾಜಧಾನಿ ದೆಹಲಿ ಗದ್ದುಗೆಯನ್ನು ಬಿಜೆಪಿಗೆ ಒಪ್ಪಿಸಿದ್ದು ಪ್ರಜಾಪ್ರಭುತ್ವದ ಹಿತದೃಷ್ಠಿಯಿಂದ ಅಕ್ಷಮ್ಯ ಅಪರಾಧವೆಂದರೂ ತಪ್ಪೇನಿಲ್ಲ.
ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಇಂಡಿಯಾ ಒಕ್ಕೂಟದಡಿ ಒಗ್ಗೂಡಿದ ಈ ಎರಡೂ ರಾಷ್ಟ್ರೀಯ ಪಕ್ಷಗಳು ಒಕ್ಕೂಟದ ಇತರೆ ಮಿತ್ರ ಪಕ್ಷಗಳೊಂದಿಗೆ ಸೇರಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಬೆವರಿಳಿಸಿ, ಬಿಜೆಪಿಯ 400 ಸೀಟುಗಳ ಏಕಾಂಗಿ ಕನಸಿಗೆ ತಣ್ಣೀರೆರಚಿ, 240 ಸೀಟುಗಳಿಗೆ ಸೀಮಿತಗೊಳಿಸಿ ಸರಳ ಬಹುಮತವೂ ಬಾರದಂತೆ ತಡೆದದ್ದು ಐತಿಹಾಸಿಕ.
ಲೋಕಸಭಾ ಚುನಾವಣೆ ನಂತರ ನಡೆದ ಹರಿಯಾಣ ವಿಧಾನಸಭೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ, ಇಂಡಿಯಾ ಒಕ್ಕೂಟದ ಸೋಲಿನ ಕುರಿತು ಬಹಿರಂಗವಾಗಿಯೇ ಕಾಂಗ್ರೆಸ್ ಎಂಬ ದೊಡ್ಡಣ್ಣನ ನಡೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ತೃಣಮೂಲ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಇಂಡಿಯಾ ಒಕ್ಕೂಟದ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದ್ದವು.
ಈ ಮಧ್ಯೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಆಮ್ ಆದ್ಮಿಯ ದೆಹಲಿ ರಾಜ್ಯ ಸರ್ಕಾರದ ವಿರುದ್ಧ ಅಬಕಾರಿ ಹಗರಣದ ನೆಪದಲ್ಲಿ ಸಂಬಂಧಪಟ್ಟ ಇಲಾಖೆ ಮಂತ್ರಿ, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹಾಗೂ ಕೊನೆಗೆ ಮುಖ್ಯಮಂತ್ರಿ ಕೇಜ್ರಿವಾಲ್ ಸೇರಿದಂತೆ ತಿಂಗಳುಗಟ್ಟಲೆ ತನಿಖೆ ನೆಪದಲ್ಲಿ ಜೈಲಿಗಟ್ಟಿದರೂ ಅವರ ವಿರುದ್ಧ ದೋಷಾರೋಪ ಸಾಬೀತು ಪಡಿಸಲು ವಿಫಲವಾಗಿದ್ದು ಗಮನಾರ್ಹ.
ಜಾಮೀನಿನ ಮೇಲೆ ಹೊರಬಂದ ನಂತರ ಆಮ್ ಆದ್ಮಿಯ ಮುಖಂಡರು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸೀಟು ಒಪ್ಪಂದದ ಕುರಿತು ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು. ಪಕ್ಷದ ಅಸ್ತಿತ್ವದ ನೆಪವೊಡ್ಡಿದ ಕಾಂಗ್ರೆಸ್ ಪಕ್ಷದ ದೆಹಲಿ ಘಟಕದ ಮುಖ್ಯಸ್ಥ ಅಜಯ್ ಮಾಕನ್ ಪ್ರತ್ಯೇಕವಾಗಿ ಸ್ಪರ್ಧಿಸುವ ಹೇಳಿಕೆಗಳನ್ನು ನೀಡಿ, ಅದರಂತೆಯೇ ನಡೆದುಕೊಂಡು ಸಮಾನ ಶತ್ರು ಎಂದು ಪರಿಗಣಿಸಿದ್ದ ಬಿಜೆಪಿಗೆ ತಮ್ಮ ಮತ ವಿಭಜನೆಯ ಮೂಲಕ ಲಾಭ ಮಾಡಿಕೊಟ್ಟು ದೆಹಲಿ ಗದ್ದುಗೆ ನಿರಾಯಾಸವಾಗಿ ದೊರಕುವಂತೆ ಮಾಡಿ, ದೇಶಾದ್ಯಂತ ಇರುವ ಸಂವಿಧಾನ ಪ್ರಿಯರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಕಳೆದೊಂದು ದಶಕದಿಂದ ದೇಶಾದ್ಯಂತ ತಂತ್ರ-ಕುತಂತ್ರದ (ಆಪರೇಷನ್ ಕಮಲ, ತನಿಖಾ ಸಂಸ್ಥೆಗಳ ಬೆದರಿಕೆ) ಮೂಲಕ ವಿರೋಧ ಪಕ್ಷಗಳನ್ನು ಹಣಿಯುತ್ತಲೇ ಅಧಿಕಾರ ಕಸಿದುಕೊಳ್ಳುತ್ತಿದ್ದ ಬಿಜೆಪಿಗೆ ಈ ಭಾರಿ ಮಿತ್ರರ ಜಗಳ ಶತ್ರುವಿಗೆ ಲಾಭ ಎಂಬಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಸಿಂಹ ಸ್ವಪ್ನವಾಗಿ ನೆಮ್ಮದಿ ಭಂಗಕ್ಕೆ ಕಾರಣವಾಗಿದ್ದ ಆಮ್‌ಆದ್ಮಿ ಸೋಲಿನಿಂದ ಬಿಜೆಪಿ ಮರ್ಯಾದೆ ಉಳಿದಂತಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ.
ಸೋಲಿಗೆ ಕಾರಣಗಳು:
- ಸ್ವಪ್ರತಿಷ್ಠೆ
- ದುಬಾರಿ ಜೀವನ ಆರೋಪ
- ಅಲ್ಪ ಸಂಖ್ಯಾತರ ಕಡೆಗಣನೆ
- ಭ್ರಷ್ಟಾಚಾರದ ಆರೋಪ
- ವಿಫಲ ಮೈತ್ರಿ
ದೆಹಲಿ ಫಲಿತಾಂಶ:
ಪಕ್ಷ – ಸೀಟು
ಬಿಜೆಪಿ – 48
ಆಪ್ – 22
ಕಾಂಗ್ರೆಸ್ – 00
ಒಟ್ಟು ಸೀಟು – 70