ಶಿರಾ: ಒಳ ಮೀಸಲಾತಿಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿ ಶಿರಾ ನಗರದ ಡಾ. ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಯಿಂದ ಹೊರಟ ಕಾಲ್ನಡಿಗೆ ಜಾಥಾದ ತಂಡ ದೊಡ್ಡ ಆಲದ ಮರದ ಬಳಿ ವಾಸ್ತವ್ಯ ಹೂಡಿ ಸೋಮವಾರ ಎರಡನೇ ದಿನದ ಕಾಲ್ನಡಿಗೆ ಜಾಥಾ ಪ್ರಾರಂಭವಾಯಿತು.
ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಮಾದಿಗ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಆರ್ ರಂಗನಾಥ್ ಅವರು, ಒಳಮೀಸಲಾತಿಯ ಬಗ್ಗೆ ಶಿರಾ ಕ್ಷೇತ್ರದ ಶಾಸಕರಾದ ಟಿಬಿ ಜಯಚಂದ್ರ ಅವರಾಗಲಿ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಗೋವಿಂದ ಕಾರಜೋಳರವರಾಗಲಿ ಈವರೆಗೂ ಕಾಲ್ನಡಿಗೆ ಜಾಥಾದ ತಂಡವನ್ನು ಸಂಪರ್ಕಿಸುವುದಾಗಲಿ ಅಥವಾ ನಿಮ್ಮ ಪರ ಇದ್ದೇವೆ ಎಂದು ಹೇಳುವುದಾಗಲಿ ಮಾಡಿಲ್ಲ. ಶಿರಾ ವಿಧಾನಸಭಾ ಕ್ಷೇತ್ರದ ಮತದಾರರ ಪೈಕಿ ಮಾದಿಗ ಸಮುದಾಯದ ಮತಗಳೇ ನಿರ್ಣಾಯಕ ಎಂದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರುಗಳು ಒಳ ಮೀಸಲಾತಿ ಹೋರಾಟಗಾರರಿಗೆ ಈವರೆಗೂ ಬೆಂಬಲ ಸೂಚಿಸದಿರುವುದು ಮಾದಿಗ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂದೆ ಬರುವ ಉಪಚುನಾವಣೆಯಲ್ಲಿ ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಹಾಗೂ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ರಾಜ್ಯ ವ್ಯಾಪ್ತಿ ಮೂರು ಪಕ್ಷಗಳ ವಿರುದ್ಧ ನಮ್ಮ ಸಮುದಾಯ ತಿರುಗಿ ಬೀಳುವುದು ನಿಶ್ಚಿತ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಲಿತಪರ ಹೋರಾಟಗಾರ ಜಿ.ಎಸ್ ಮಂಜುನಾಥ್, ಮಾಜಿ ನಗರಸಭಾ ಸದಸ್ಯ ಕೆ.ಮಂಜುನಾಥ್, ಎನ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.