ಶಿರಾ: ಶಿಕ್ಷಣವು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಣೆ ನೀಡುವುದು ಆ ಮೂಲಕ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಮತ್ತು ಬದುಕು ಉಜ್ವಲಗೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿಯಿದೆ, ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಹಾಗೂ, ವಾಸ್ತವ ಸಂಗತಿಗಳನ್ನು ಅರಿತು, ನೈತಿಕ ಮೌಲ್ಯಗಳನ್ನು ಬಗ್ಗೆ ಬೋಧಿಸಿದರೆ ಸ್ವಾಸ್ಥ÷್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿದಂತಾಗುತ್ತದೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಡಾ ಬಾಲಗುರುಮೂರ್ತಿ ಹೇಳಿದರು.
ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣಾ ಸಂಬಂಧ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಿಯುಸಿ ಶಿಕ್ಷಣ ಬಹುಮುಖ್ಯ. ಇಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಹಾಗೂ ಸಂಸ್ಕಾರವನ್ನು ಉಪನ್ಯಾಸಕರು ಕಲಿಸಿದಲ್ಲಿ ಮಕ್ಕಳ ಬದುಕಿನ ದಿಕ್ಕೆ ಬದಲಾಗಿ ಸಮಾಜಕ್ಕೆ ಮಾದರಿಯಾಗಿ ಬೆಳಕಾಗಿ ಬದುಕುತ್ತಾರೆ. ಈ ನಿಟ್ಟಿನಲ್ಲಿ ಮೊಟ್ಟಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಉಪನ್ಯಾಸಕರ ಸಭೆ ಕರೆಯಲಾಗಿದೆ. ಕಾರಣ ಇಷ್ಟೇ ಫಲಿತಾಂಶ ಸುಧಾರಣೆಗೆ ಈವರೆಗೂ ಪ್ರಾಂಶುಪಾಲರುಗಳಿಗೆ ತಾಕೀತು ಮಾಡಲಾಗುತ್ತಿತ್ತು.
ಪರಿಣಾಮಕಾರಿಯಾಗದ್ದನ್ನು ಗಮನಿಸಿ ಪ್ರತಿ ತಾಲ್ಲೂಕಿನಲ್ಲಿ ಕರೆದಿರುವೆ. ಮಧುಗಿರಿ ವಿಭಾಗದಲ್ಲಿ ಕೊರಟಗೆರೆ, ಮಧುಗಿರಿ, ಪಾವಗಡ, ಸಭೆ ನಡೆಸಿದ್ದು ಉತ್ತಮ ಪ್ರತಿಕ್ರಿಯೆ ಹಾಗೂ ಫಲಿತಾಂಶ ಸುಧಾರಣೆಗೆ ಉಪನ್ಯಾಸಕರು ಬದ್ಧತೆ ತೋರಿಸಿರುವರು. ಇಂದು ಶಿರಾದಲ್ಲೂ ಉತ್ತಮ ಆಶಾಭಾವನೆ ಹೊಂದಿ ಪ್ರಯತ್ನಿಸುವಿರೆಂಬ ವಿಶ್ವಾಸವಿದೆ ಎಂದ ಅವರು ಶಾಲಾ ಕಾಲೇಜುಗಳಲ್ಲಿ ಗುರುಗಳು ಮಾದರಿಯುತ ನಡೆ ನುಡಿಯ ವ್ಯಕ್ತಿತ್ವ ನಿಮ್ಮದಾದರೆ ವಿದ್ಯಾರ್ಥಿಗಳು ನಿಮ್ಮನ್ನು ಅನುಕರಿಸುತ್ತಾರೆ, ಇದರಿಂದ ಮಕ್ಕಳ ಮನಸ್ಸಿನಲ್ಲಿ ನಿಮ್ಮ ವ್ಯಕ್ತಿತ್ವ ಶಾಶ್ವತವಾಗಿ ಹಚ್ಚೊತ್ತುತ್ತದೆ ಎಂದರು.
ಪ್ರಾಂಶುಪಾಲರ ಸಭೆಗಿಂತ ಉಪನ್ಯಾಸಕರಿಗೆ ಈ ನಿಟ್ಟಿನಲ್ಲಿ ಮನವರಿಕೆ ಮಾಡಲು ಕಾರಣ ಉಪನ್ಯಾಸಕರು ನೇರವಾಗಿ ಮಕ್ಕಳ ಸಂಪರ್ಕದಲ್ಲಿರುವರು. ಮಕ್ಕಳ ಆಕರ್ಷಣೆ ವಿಕರ್ಷಣೆಗಳು ಅವರಿಗೆ ತಿಳಿದಿರತ್ತದೆ. ಓದಿನಲ್ಲಿ ಹಿಂದೆ ಬಿದ್ದವರನ್ನು ಗುರುತಿಸುವಲ್ಲಿ ಉಪನ್ಯಾಸಕರ ಪಾತ್ರ ಹಿರಿದು.ಪರಿಹಾರ ಬೋಧನೆ, ನಿರೀಕ್ಷಿತ ಪ್ರಶ್ನೆ ಪತ್ರಿಕೆ ಬಿಡಿಸುವುದು, ಮನೆಯಲ್ಲಿ ಬರೆಯಲು ಓದಲು ಪ್ರೋತ್ಸಾಹ ನೀಡಬೇಕು. ,ಪೋಷಕರ ಜೊತೆ ಮಾತನಾಡಿ ಮಾರ್ಗದರ್ಶನ ನೀಡುವುದು,ಘಟಕ ಪರೀಕ್ಷೆ,ಗುಂಪು ಚರ್ಚೆ,ಕಡ್ಡಾಯ ಹಾಜರಾತಿಗೆ ಪ್ರೇರಣೆ ನೀಡುವಂತ, ಇವೆಲ್ಲ ಕಾರ್ಯಗಳು ಸಮರ್ಪಕವಾಗಿ ನಿರ್ವಹಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದರಿತು ಸಭೆ ಕರೆದು ತಿಳಿಸಲಾಗುತ್ತಿದೆ.ನೂರೆಂಟು ನಕಾರಾತ್ಮಕ ಪ್ರಶ್ನೆಗಳಿದ್ದರೂ ಬದಿಗೊತ್ತಿ ಮೇಲೆ ತಿಳಿಸಿದ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿ ಫಲಿತಾಂಶ ಸುಧಾರಿಸಿ ಜೊತೆಗೆ ಪ್ರಾಂಶುಪಾಲರ ಎಲ್ಲ ಕೆಲಸಗಳಲ್ಲಿ ತಾವು ತೊಡಗಿಸಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರರೆಡ್ಡಿ, ನೋಡಲ್ ಕಾಲೇಜಿನ ಪ್ರಾಂಶುಪಾಲರಾದ ಧನಶಂಕರ್, ಪ್ರಾಂಶುಪಾಲರಾದ ಚಂದ್ರಯ್ಯ, ಚಂದ್ರಶೇಖರ ರೆಡ್ಡಿ, ವಸಂತಕುಮಾರ್, ಡಾ ನಂದೀಶ್ವರ್, ರಾಜ್ಯ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜು, ಉಪನ್ಯಾಸಕಾದ ವೇದಮೂರ್ತಿ, ಗಿರಿಸ್ವಾಮಿ ಹಾಗೂ ಶಿರಾ ತಾಲ್ಲೂಕಿನ ಎಲ್ಲಾ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರುಗಳು ಹಾಜರಿದ್ದರು.