ತುಮಕೂರು: ಸರಕಾರದ ಅಭಿವೃದ್ದಿ ಕಾಮಗಾರಿಗಳಲ್ಲಿ ಎಸ್ಸಿ,ಎಸ್ಟಿ ವರ್ಗದ ಗುತ್ತಿಗೆದಾರರಿಗೆ 1 ಕೋಟಿವರೆಗಿನ ಮೀಸಲಾತಿ ಪ್ರಕಟಿಸಿರುವ ರಾಜ್ಯ ಸರಕಾರ,ಕಳೆದ ಒಂದುವರೆ ವರ್ಷದಿಂದ ಈ ವರ್ಗದವರಿಗೆ ಒಂದೇ ಒಂದು ಗುತ್ತಿಗೆ ಕಾಮಗಾರಿ ಯನ್ನು ನೀಡದೆ ನಿರುದ್ಯೋಗಿಯಾಗಿಸಿದೆ ಎಂದು ಕರ್ನಾಟಕ ರಾಜ್ಯ ಎಸ್ಸಿ,ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಹದೇವಸ್ವಾಮಿ ಆರೋಪಿಸಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಎಸ್ಸಿ,ಎಸ್ಟಿ ವರ್ಗದ ಗುತ್ತಿಗೆದಾರರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಕಳೆದ ಒಂದುವರೆ ವರ್ಷದಲ್ಲಿ ನೀಡಿರುವ ಎಲ್ಲಾ ಗುತ್ತಿಗೆಗಳು 5-10 ಕೋಟಿ ರೂಗಳ ಪ್ಯಾಕೇಜ್ ಆಗಿದ್ದು,ಈ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.ಇದು ಸರಕಾರವೇ ಸೃಷ್ಟಿಸಿದ ನಿರುದ್ಯೋಗವಾಗಿದೆ ಎಂದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ 2013ರಲ್ಲಿ ಎಸ್ಸಿ,ಎಸ್ಟಿ ಗುತ್ತಿಗೆ ಮೀಸಲು ಕಾಯ್ದೆ ಮಾಡಿ, ಅದನ್ನು ಜಾರಿಗೆ ತಂದಿದ್ದು 2017ರಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕಾಯ್ದೆ ಜಾರಿಯಾಗದೆ ಈ ವರ್ಗದ ಗುತ್ತಿಗೆದಾರರು ಜಾತಕ ಪಕ್ಷಿಗಳಂತೆ ಕಾಯಬೇಕಾಯಿತು.ಆದರೆ ಇದೇ ಸಿದ್ದರಾಮಯ್ಯ ಅವರು ವಿರೋಧಪಕ್ಷದ ನಾಯಕರಾಗಿದ್ದಾಗ ಈ ವರ್ಗದ ಗುತ್ತಿಗೆದಾರರಿಗೆ 2 ಕೋಟಿ ವರೆಗಿನ ಕಾಮಗಾರಿಗಳನ್ನು ಮಾಡಲು ಅವಕಾಶ ಕೊಡುಬೇಕು ಎಂದು ವಿಧಾನಸಭೆಯಲ್ಲಿ ವಾದ ಮಂಡಿಸಿದ್ದರು.ಆದರೆ ಅವರೇ ಪುನಃ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಕಳೆದರೂ ಅದನ್ನು ಜಾರಿ ಮಾಡಿಲ್ಲ. ನಿಜವಾಗಲು ಎಸ್ಸಿ, ಎಸ್ಟಿ ಜನಾಂಗದ ಬಗ್ಗೆ ನಿಮ್ಮ ಕಾಳಜಿ ನಿಜವೇ ಆಗಿದ್ದರೆ ಮೊದಲು ಮೀಸಲಾತಿ ಮೊತ್ತವನ್ನು 2 ಕೋಟಿ ರೂಗಳಿಗೆ ಹೆಚ್ಚಿಸಬೇಕು ಎಂದು ಮಹದೇವಸ್ವಾಮಿ ಆಗ್ರಹಿಸಿದರು.
ಪರಿಶಿಷ್ಟ ಜಾತಿ, ಜನಾಂಗದವರು ಅರ್ಥಿಕವಾಗಿ ಮುಂದೆ ಬರಬೇಕು ಎಂದು ಮಾರುದ್ದ ಭಾಷಣ ಬಿಗಿಯುವ ರಾಜಕೀಯ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಎಸ್ಸಿ,ಎಸ್ಟಿ ಗುತ್ತಿಗೆ ಮೀಸಲು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತಂದಿಲ್ಲ. ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಮತ್ತು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಕೆ.ಎನ್.ರಾಜಣ್ಣ ಅವರುಗಳು ತಮ್ಮ ಕ್ಷೇತ್ರಗಳಲ್ಲಿ ಜಾರಿ ಮಾಡಿಲ್ಲ.ಮೀಸಲು ಕ್ಷೇತ್ರಗಳಲ್ಲಿಯೇ ಈ ಕಾಯ್ದೆಗೆ ಬೆಲೆ ಇಲ್ಲ ಎಂದರೆ ಇನ್ನೂ ಸಾಮಾನ್ಯ ಕ್ಷೇತ್ರಗಳಲ್ಲಿ ಗುತ್ತಿಗೆದಾರರ ಪಾಡೇನು ಎಂದು ಪ್ರಶ್ನಿಸಿದ ಮಹದೇವಸ್ವಾಮಿ,ಎಸ್ಸಿ,ಎಸ್ಟಿ ಗುತ್ತಿಗೆದಾರರು ಇತರೆ ವರ್ಗದ ಗುತ್ತಿಗೆದಾರರ ಜೊತೆಗೆ,ಸರಕಾರದ ನಿರ್ಮಾಣ ಸಂಸ್ಥೆಗಳಾದ ನಿರ್ಮಿತಿಕೇಂದ್ರ, ಕ್ರೆಡಿಲ್, ಪಿಅರ್.ಇ.ಡಿ ಹಾಗು ಶಾಸಕರೊಂದಿಗೂ ಸ್ಪರ್ಧೆ ಮಾಡಬೇಕಾಗಿದೆ.ಶಾಸಕರ ಅನುಮತಿ ಇಲ್ಲದೆ ಒಂದೇ ಒಂದು ಟೆಂಡರ್ ಸಹ ಪಡೆಯಲು ಸಾಧ್ಯವಾಗುತ್ತಿಲ್ಲ.ಹಾಗಾಗಿ ಸರಕಾರ ಎಲ್ಲಾ ಶಾಸಕರಿಗೆ ಗುತ್ತಿಗೆ ಮೀಸಲು ಕಾಯ್ದೆ ಕುರಿತು ಕಾರ್ಯಾಗಾರ ನಡೆಸಿ, ಇದರ ಉದ್ದೇಶವನ್ನು ತಿಳಿಸಿ,ಈ ವರ್ಗದ ಗುತ್ತಿಗೆದಾರರಿಗೆ ಕೆಲಸ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸುಮಾರು 14500 ಜನ ಎಸ್ಸಿ,ಎಸ್ಟಿ ಗುತ್ತಿಗೆದಾರರಿದ್ದು, ಇವರಿಗೆ ಸರಕಾರದಿಂದ ಇದುವರೆಗೂ ಸುಮಾರು 500 ಕೋಟಿಗೂ ಹೆಚ್ಚು ಹಣ ಬಾಕಿ ಬರಬೇಕಾಗಿದೆ.ಇಲಾಖೆಗಳು ಎನ್.ಓ.ಸಿ. ಬಿಡುಗಡೆ ಮಾಡುವಾಗ ಎಸ್ಸಿ, ಎಸ್ಟಿ ಗುತ್ತಿಗೆದಾರರ ಬಿಲ್ ಮೊದಲು ಪಾವತಿಸುವಂತೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಸರಕಾರದ ಆದೇಶಗಳಿಗೆ ಬೆಲೆ ನೀಡುವುದಿಲ್ಲ. ಇದರಿಂದ ಸಾಲ ಮಾಡಿ ಕಾಮಗಾರಿ ಮುಗಿಸಿದ ಗುತ್ತಿಗೆದಾರರು ಸಾಲ,ಬಡ್ಡಿ,ಚಕ್ರ ಬಡ್ಡಿ ಎಂದು ಪರಿತಪಿಸುವಂತಾಗಿದೆ. ಹಾಗಾಗಿ ಮೊದಲು ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಸರಕಾರ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ಬೇಡಿಕೆಯಂತೆ ಮೀಸಲು ಕಾಮಗಾರಿ ಮೊತ್ತವನ್ನು 1 ಕೋಟಿ ಯಿಂದ 2 ಕೋಟಿಗೆ ಹೆಚ್ಚಿಸಬೇಕು,ಬಾಕಿ ಇರುವ ಕಾಮಗಾರಿ ಬಿಲ್ ಪಾವತಿಸಬೇಕು ಹಾಗೂ ನಿರುದ್ಯೋಗಿ ಗಳಾಗಲು ಕಾರಣವಾಗಿರುವ ಪ್ಯಾಕೇಟ್ ಟೆಂಡರ್ ಪದ್ದತಿ ರದ್ದು ಮಾಡಬೇಕು. ಸರಕಾರ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಮಹದೇವಸ್ವಾಮಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್ಸಿ,ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯ ಕಾರ್ಯದರ್ಶಿ ಓಂಪ್ರಕಾಶ್,ಜAಟಿ ಕಾರ್ಯದರ್ಶಿ ಯೋಗೀಶ್, ಖಜಾಂಚಿ ಹೇಮಕುಮಾರ್, ತುಮಕೂರು ಜಿಲ್ಲಾ ಘಟಕದ ಪದಾಧಿಕಾರಿಗಳಾದ ಗೋವಿಂದರಾಜು, ಲಕ್ಷಿö್ಮನರಸಯ್ಯ, ರಂಜನ್.ಎ, ಎಸ್.ಆರ್.ಚಿಕ್ಕಣ್ಣ ಮತ್ತಿತರರು ಭಾಗವಹಿಸಿದ್ದರು.