ಹೆಬ್ಬೂರು: ಹೋಬಳಿಯ ನಿಡುವಳಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೊಂಡಗೆರೆ ಗ್ರಾಮದಲ್ಲಿ ವಾಸವಿರುವ ದೊಡ್ಡನರಸಯ್ಯ ಅವರು ಅನುಭವದಲ್ಲಿರುವ ನಿವೇಶನದ ದಾಖಲಾತಿಗಳು ಲಭ್ಯವಿಲ್ಲ ಎಂಬ ಹಿಂಬರಹವನ್ನು ಪಂಚಾಯತ್ ಅಧಿಕಾರಿಗಳು ನೀಡುವ ಮೂಲಕ ನಿವೇಶನವೇ ತಮ್ಮದಲ್ಲ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ನಿವಾಸಿ ದೊಡ್ಡನರಸಯ್ಯ ಅವರ ಮಗ ರಾಮಪ್ರಾದ್ ಅಳಲು ತೋಡಿಕೊಂಡರು.
ಇವರು ಕಟ್ಟಿಕೊಂಡಿದ್ದ ಮಣ್ಣಿನ ಮನೆ (ಖಾತಾ ನಂ. 213/1) ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ನೆಲಕ್ಕೆ ಉರುಳಿ ಬಿದ್ದಿದೆ. ಈ ಮನೆಗೆ ಪರಿಹಾರವು ಕೂಡ ದೊರೆತಿಲ್ಲ. ಪ್ರಸ್ತುತ ಈ ಮಂದಿ ಮೇಕೆ ಕುರಿಗಳನ್ನು
ಕಟ್ಟಿಕೊಂಡು ಗುಡಿಸಲಿನಲ್ಲೇ ವಾಸಮಾಡುತ್ತಿದ್ದಾರೆ. ವ್ಯವಸಾಯ ಮಾಡಿ ಬದುಕುತ್ತಿರುವ ಇವರ ಪಾಡು ಶೋಚನೀಯವಾಗಿದೆ.
ಪಂಚಾಯ್ತಿಯಲ್ಲಿ ದಾಖಲೆಗಳಿಲ್ಲವಂತೆ!: ಮನೆ ಬಿದ್ದಾಗ ಪರಿಹಾರಕ್ಕಾಗಿ ಮನೆ ದಾಖಲೆ ಕೇಳಲು ನಿಡುವಳಲು
ಪಂಚಾಯಿತಿಗೆ ಹೋದಾಗ ನಿಮ್ಮ ಮನೆಯ ಯಾವುದೇ ದಾಖಲೆಗಳು ನಮ್ಮಲ್ಲಿ ಇಲ್ಲ ಎಂದು ಪಿಡಿಒ ಹಿಂಬರಹ ನೀಡುತ್ತಿದ್ದಾರೆ. ನಿವಾಸಿ ದೊಡ್ಡನರಸಯ್ಯ ಅವರ ತಂದೆ ದುರ್ಗಯ್ಯ ಬಿನ್ ನಾಗಯ್ಯ ಅವರ ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಕೂಡ ಇದೆ. 1995-96ರ ವರೆಗೂ ಕಂದಾಯ ಕಟ್ಟುತ್ತಲೂ ಬರಲಾಗಿದೆ ಎಂದು ಕಂದಾಯ ರಶೀತಿ (ರಶೀತಿ ಸಂಖ್ಯೆ: 154921/ 10.11.1995) ತೋರಿಸಿದರೂ ಈ ದಾಖಲೆಗಳು ಲಭ್ಯವಿಲ್ಲ ಎಂದು ಹೇಳಿ ಹಿಂಬರಹ ನೀಡಿರುವುದಾಗಿ ಮನೆ ಕಳೆದು ಕೊಂಡವರು ತಿಳಿಸಿದರು.
ದಲಿತ ಕುಟುಂಬಕ್ಕೆ ಕಿರುಕುಳ: ಸುಮಾರು 50 ವರ್ಷಗಳಿಂದ ಈ ಕುಟುಂಬ ಇಲ್ಲೇ ವಾಸವಿದ್ದು, ನಿವೇಶನವನ್ನು ಅನುಭವಿಸುತ್ತಾ ಬಂದಿದ್ದಾರೆ. ಮಳೆಗೆ ಮನೆ ಬಿದ್ದಿರುವುದರಿಂದ ಒಂದು ಪುಟ್ಟ ಜೋಪಡಿಯಲ್ಲೇ ವಾಸವಿದ್ದಾರೆ. ಈಗ ಇವರನ್ನು ಈ ಸ್ಥಳದಿಂದ ಓಡಿಸಿ ನಿವೇಶನವನ್ನು ಕಬಳಿಸುವ ಹುನ್ನಾರ ಕೂಡ ಕೆಲವರಿಂದ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಸುತ್ತಲೂ ಸವರ್ಣೀಯರ ಮನೆಗಳಿದ್ದು, ಮಧ್ಯದಲ್ಲಿ ಒಂದೇ ದಲಿತ ಸಮುದಾಯಕ್ಕೆ ಸೇರಿದ ಇವರ ಕುಟುಂಬ ವಾಸವಿರುವುದರಿಂದ ಜಾಗ ಬಿಡಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆಪಾದನೆಯನ್ನೂ ಮಾಡಿದ್ದಾರೆ.
ಖಾಸಗೀ ವ್ಯಕ್ತಿಗಳ ಅತಿಕ್ರಮಣ: ಖಾಸಗೀ ವ್ಯಕ್ತಿಯೊಬ್ಬರು ನಿತ್ಯ ಜೋಪಡಿ ಬಳಿ ಬಂದು ಜಾಗ ಖಾಲಿ ಮಾಡುವಂತೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಹಲ್ಲೆಗೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಮ ಪ್ರಸಾದ್ ಕಣ್ಣೀರು ಹಾಕಿದರು.
ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ: ನಮಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರನ್ನೂ ಸಹ ನೀಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಹೆಬ್ಬೂರು ಠಾಣೆಗೆ ದೂರು ನೀಡಿದರೂ ನಮ್ಮ
ದೂರನ್ನು ಸ್ವೀಕರಿಸುತ್ತಿಲ್ಲ. ಸವರ್ಣೀಯರ ಪರವಾಗಿಯೇ ಪೊಲೀಸರಿದ್ದಾರೆ. ನಮ್ಮ ನಿವೇಶನದ ಮುಂದೆ ಅಂಬೇಡ್ಕರ್ ಮತ್ತು ದಲಿತ ಸಂಘರ್ಷ ಸಮಿತಿಯ ಬೋರ್ಡ್ ಹಾಕಿಕೊಂಡಿದ್ದೇವೆ. ಅದನ್ನು ಕಿತ್ತು ಬಿಸಾಡುವಂತೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪ ಮಾಡಿದರು.
ಡಿಸಿ ಹಾಗೂ ಇಒಗೆ ಬರೆದ ಪತ್ರ ನಿಷ್ಪ್ರಯೋಜಕ!?: ಮಳೆಗೆ ಮನೆ ಬಿದ್ದು, ಆಡುಗಳನ್ನು ಕಟ್ಟಿಕೊಂಡು ಜೋಪಡಿಯಲ್ಲಿ ವಾಸವಿದ್ದೇವೆ. ಹಾನಿಯಾದ ಮನೆಗೆ ಸರಿಯಾದ ದಾಖಲೆಗಳಿಲ್ಲದ ಕಾರಣ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಪಂಚಾಯ್ತಿಗೆ ಕಟ್ಟಿರುವ ಕಂದಾಯ ರಶೀತಿ ಹಾಗೂ ನಮ್ಮಲ್ಲಿರುವ ಡಿಮ್ಯಾಂಡ್ ಡ್ರಾಫ್ಟ್ ಗೂ ಬೆಲೆ ಇಲ್ಲದಂತಾಗಿದೆ. ಸ್ವಲ್ಪ ನಮ್ಮ ಮೇಲೆ ಮಾನವೀಯತೆ ತೋರಿ ಮನೆ ಕಟ್ಟಿಕೊಳ್ಳಲು ಸಹಾಯ ಮಾಡಬೇಕು. ಹೀಗೆಂದು ಜಿಲ್ಲಾಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹ ಅಧಿಕಾರಿ ಅವರಿಗೆ ಪತ್ರ ಬರೆಯಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ತುಮಕೂರು ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ರೀತಿಯ ಪ್ರಕರಣಗಳು ಇತ್ತೀಚಿಗೆ ಬೆಳಕಿಗೆ ಬರುತ್ತಲೇ ಇವೆ. ಆದರೂ ಅಧಿಕಾರಿಗಳು ಬಡವರ ಪರವಾಗಿ ನಿಲ್ಲದಿರುವುದು ಬೇಸರದ ಸಂಗತಿ. ವರ್ಷಾನುಗಟ್ಟಲೆ ನಿವೇಶನದಲ್ಲಿ ಅನುಭವದಲ್ಲಿದ್ದು, ಕಂದಾಯವನ್ನೂ ಕಟ್ಟಿಕೊಂಡು ಬಂದಿದ್ದಾರೆ. ಆದರೆ ಆ ಜಾಗ ನ್ಯಾಯ ಬದ್ಧವಾಗಿ ಅವರಿಗೇ
ಸೇರಬೇಕಾದದು. ಈ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿ ಇಒ ಅವರು ಕ್ರಮ ಕೈಗೊಂಡು ಬಡವರೊಂದಿಗೆ ನಿಲ್ಲಬೇಕಿದೆ.
ತಾಪಂ ಇಒ ಜನಪರವಾಗಿಲಿ: ತುಮಕೂರು ತಾಲೂಕು ಪಂಚಾಯತ್ ಇಓ ಅವರು ಜನಪರವಾಗಿದ್ದಾರೆ ಎಂಬ ಭರವಸೆ ಎಲ್ಲರಲ್ಲೂ ಇದೆ. ಆದರೆ ದೊಡ್ಡ ನರಸಯ್ಯ ಅವರ ಮನೆಗೆ ಸಂಬಂಧಿಸಿದ ಸಮಸ್ಯೆ ತಮ್ಮ ಕಚೇರಿಗೆ ಅರ್ಜಿ ಮೂಲಕ ತಲುಪಿದ್ದರೂ ಅತ್ತ ತಿರುಗಿಯೂ ನೋಡಿಲ್ಲ ಎಂದರೆ ನಂಬಲಾಗುವುದಿಲ್ಲ. ಬಡವರಿಗೆ ನ್ಯಾಯ ನೀಡಲಾಗದಿದ್ದರೂ ಅನ್ಯಾಯವಾಗಲು ಅಧಿಕಾರಿಗಳು ಅವಕಾಶ ಮಾಡಿಕೊಡಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕು.
ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ: ಹತ್ತಾರು ಹಳ್ಳಿಗಳು ಸೇರುವ ಗ್ರಾಮ ಪಂಚಾಯ್ತಿಯಲ್ಲಿ ದಾಖಲೆಗಳೇ ಇಲ್ಲ ಎಂದರೆ ಹೇಗೆ? ಅದರ ಹೊಣೆಯನ್ನು ಯಾರು ಹೊರುವರು? ದಾಖಲೆ ಕಳುವಾಗಿದೆ ಅಥವಾ ದಾಖಲೆಗಳೇ ಇಲ್ಲ ಎಂದು ಹಿಂಬರಹ ನೀಡುವ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಈ ಬಗ್ಗೆ ಪ್ರತಿಕ್ರಿಯೆ ನೀಡಲು ತುಮಕೂರು ತಾಪಂ ಇಒ ಅವರಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ.