ತುಮಕೂರನ್ನು ಮತ್ತೊಂದು ಬೆಂಗಳೂರನ್ನಾಗಿ ಮಾಡುತ್ತೇನೆ: ವಿ.ಸೋಮಣ್ಣ

ತುಮಕೂರು-ಯಶವಂತಪುರ ಹೊಸ ಮೆಮು ರೈಲು ಲೋಕಾರ್ಪಣೆ

ತುಮಕೂರು: ರಾಜ್ಯದಲ್ಲಿ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ರೈಲ್ವೆ ಕ್ರಾಂತಿ ಮಾಡಲು ಬದ್ಧವಾಗಿರುವುದಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಇಂದಿಲ್ಲಿ ತಿಳಿಸಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ತುಮಕೂರು-ಯಶವಂತಪುರ ಹೊಸ ಮೆಮು ರೈಲು ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನಿನ್ನು ಇಲಾಖೆಯ ಬಗ್ಗೆ ಬಹಳ ತಿಳಿದುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ. ನನ್ನ ಅವಧಿಯಲ್ಲಿ ರಾಜ್ಯದಲ್ಲಿ ಬಾಕಿ ಉಳಿದಿರುವ, ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಸಂಪೂರ್ಣಗೊಳಿಸುವ ಮೂಲಕ ರೈಲ್ವೆ ಕ್ರಾಂತಿ ಮಾಡುವುದಾಗಿ ಹೇಳಿದರು.

2027ರ ಮಾರ್ಚ್ ಒಳಗೆ ರಾಯದುರ್ಗ-ತುಮಕೂರು, ದಾವಣಗೆರೆ-ತುಮಕೂರು ರೈಲ್ವೆ ಮಾರ್ಗಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿವೈಷ್ಣವ್‌ರವರಿಂದ ಲೋಕಾರ್ಪಣೆ ಮಾಡಿಸಲಾಗುವುದು ಎಂದರು.

ಬೆಂಗಳೂರಿಗೆ ಸಬ್‌ಅರ್ಬನ್ ರೈಲು ಸೇವೆ ಒದಗಿಸಲು ಈಗಾಗಲೇ ಸಚಿವರಾದ ಅಶ್ವಿನಿ ವೈಷ್ಣವ್‌ರವರೊಂದಿಗೆ ಚರ್ಚೆ ಮಾಡಿದ್ದು, 2025ರೊಳಗೆ 2 ಹಂತದ ಸಬ್ ಅರ್ಬನ್ ರೈಲುಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದರು.

ತುಮಕೂರು-ಅರಸೀಕೆರೆ ಮಾರ್ಗದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ ಸ್ವಯಂ ಪ್ರೇರಿತ ಸಿಗ್ನಲ್‌ಗಳನ್ನು ಸಹ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ತುಮಕೂರನ್ನು ಮತ್ತೊಂದು ಬೆಂಗಳೂರನ್ನಾಗಿ ಮಾಡಬೇಕು ಎಂಬ ಆಸೆ ತಮಗಿದೆ. ಹಾಗಾಗಿ ತುಮಕೂರು-ಬೆಂಗಳೂರು ಮಾರ್ಗದಲ್ಲಿರುವ 2 ಪಥದ ರೈಲ್ವೆ ಹಳಿಗಳನ್ನು 4 ಲೈನ್‌ಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಿದರೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಳ್ಳುವುದರ ಜತೆಗೆ ಅಭಿವೃದ್ಧಿ ಯೋಜನೆಗಳು ಪ್ರಗತಿ ಕಾಣಲಿವೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಕಾರ್ಯೋನ್ಮುಖರಾದರೆ ಯಾವುದೇ ಒಂದು ಸಮಸ್ಯೆಯೂ ಜನಪ್ರತಿನಿಧಿಗಳ ಬಳಿಗೆ ಬರುವುದೇ ಇಲ್ಲ ಎಂದರು.

ಬೆಂಗಳೂರಿಗೆ ಸಕ್ಯೂಲರ್ ರೈಲು ಸೇವೆಯನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಇವೆಲ್ಲಾ ಸೇವೆಗಳ ಕಾರ್ಯಗತವಾದರೆ ತುಮಕೂರು ಲೋಕಸಭಾ ಕ್ಷೇತ್ರದ ಜನತೆಗೆ ಕ್ರೆಡಿಟ್ ಸಲ್ಲಬೇಕಾಗುತ್ತದೆ ಎಂದರು.

ರೈಲ್ವೆ ಇಲಾಖೆ ಸೂಕ್ಷ್ಮ ಇಲಾಖೆ. ರಕ್ಷಣಾ ಇಲಾಖೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದ ಅವರು, ಇಲಾಖೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತಿದ್ದೇನೆ ಎಂದರು.

ಅ. 15ರ ಬಳಿಕ 4 ತಿಂಗಳ ಕಾಲ ತುಮಕೂರು ಲೋಕಸಭಾ ಕ್ಷೇತ್ರದ ಜನರ ಅಹವಾಲು, ಹಳ್ಳಿಗಳ ಸ್ಥಿತಿಗತಿ ಅರಿಯಲು ಒಂದೊಂದು ತಾಲ್ಲೂಕಿನ ಪಂಚಾಯ್ತಿ ಕೇಂದ್ರ ಸ್ಥಾನಗಳಿಗೆ ಭೇಟಿ ನೀಡುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ನಗರದ ರೈಲ್ವೆ ನಿಲ್ದಾಣದ ಪಕ್ಕದ ರಸ್ತೆಯಲ್ಲಿ ಪ್ರಥಮ ದರ್ಜೆ ಕಾಲೇಜು, ಶಾಲೆಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸ್ಕೈವಾಕ್ ನಿರ್ಮಾಣ ಮಾಡುವಂತೆ ಶಾಸಕರಿಂದ ಮನವಿ ಬಂದಿದೆ. ಹಾಗಾಗಿ ಕೂಡಲೇ ಈ ಜಾಗದಲ್ಲಿ ಸ್ಕೈವಾಕ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸುವುದಾಗಿ ತಿಳಿಸಿದರು.

ಡಬಲ್ ಗೇಮ್ ಗೊತ್ತಿಲ್ಲ: ನನಗೆ ಡಬಲ್ ಗೇಮ್ ಆಡುವುದು ಗೊತ್ತಿಲ್ಲ. ಕ್ಷೇತ್ರದ ಜನರ ಪ್ರತಿ ಮತಕ್ಕೂ 100 ಪಟ್ಟು ಬೆಲೆ ಜಾಸ್ತಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಕ್ಷೇತ್ರ ಜನರ ಋಣ ನನ್ನ ಮೇಲಿದೆ. ಈ ಋಣವನ್ನು ಪ್ರಾಮಾಣಿಕವಾಗಿ ತೀರಿಸಲು ಬದ್ಧನಾಗಿದ್ದೇನೆ ಎಂದರು.
ತುಮಕೂರು ಲೋಕಸಭಾ ಕ್ಷೇತ್ರವನ್ನು ಕರ್ನಾಟಕದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಇಂಗಿತವನ್ನು ಸಚಿವ ಸೋಮಣ್ಣ ವ್ಯಕ್ತಪಡಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ಬಾಬು, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ, ಎಂ.ಟಿ. ಕೃಷ್ಣಪ್ಪ ಮಾತನಾಡಿದರು.
ಸಮಾರಂಭದಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಶಾಸಕರಾದ ನೆ.ಲ. ನರೇಂದ್ರಬಾಬು, ಹೆಚ್. ನಿಂಗಪ್ಪ, ನೈರುತ್ಯ ರೈಲ್ವೆ ಇಲಾಖೆಯ ಡಿಆರ್‌ಎಂ ಯೋಗೀಶ್ ಮೋಹನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles