ಕೆಎನ್‌ಆರ್‌ ರಕ್ಷಣೆ ಅಹಿಂದ ಹೊಣೆಯಲ್ಲವೇ?

  • ಹರೀಶ್ ಕಮ್ಮನಕೋಟೆ

ರಾಜಣ್ಣನನ್ನು ಹಣಿಯಲು ಸಾಧ್ಯವಿಲ್ಲ. ಆತ ಸ್ಟ್ರಾಂಗ್ ಲಾಯರ್..! ಆದರೂ ಹಿಂಬಾಗಿಲ ಮೂಲಕ ಹಣಿಯಲು ರಾಜಕೀಯ ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಹಿಂದ ವರ್ಗದ ಜನ ಅವರೊಂದಿಗೆ ನಿಲ್ಲಬೇಕು.

ಭಾರತದ ಇತಿಹಾಸದುದ್ದಕ್ಕೂ ಜಾತಿ ತಾರತಮ್ಯ, ಶೋಷಣೆಗಳನ್ನು ಆಚರಣೆಯಲ್ಲಿ ತರಲಾಗಿದೆ. ಸಂವಿಧಾನದ ನಂತರದ ಕಾಲಘಟ್ಟದಲ್ಲಿ ಇವೆಲ್ಲಕ್ಕೂ ತೆರೆ ಬೀಳಲಿದೆ ಎಂದು ನಂಬಲಾಗಿತ್ತಾದರೂ ಅದು ಸಂಪೂರ್ಣವಾಗಿ ಈಡೇರಿಲ್ಲ. ಅದಕ್ಕೆ ಕಾರಣ ಇಷ್ಟೆ.. ಸ್ಥಿರ ಹಾಗೂ ಚರ ಸಂಪತ್ತು ಕೆಲವೇ ಕೆಲವು ವರ್ಗಗಳ ಕೈಯಲ್ಲಿ ಕೇಂದ್ರೀಕೃತವಾಗಿತ್ತು. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದ ಕಡೆಗೆ ಭಾರತ ದಾಪುಗಾಲಿರಿಸಿದರೂ ಸಹ ಈ ಸಂಪತ್ತಿನ ಅಸಮಾನ ಹಂಚಿಕೆ ಅಸಮಾನವಾಗಿಯೇ ಉಳಿದಿತ್ತು ಮತ್ತು ಉಳಿದಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ, ಕ್ರಾಂತಿಕಾರಿ ಬದಲಾವಣೆಯೆಂಬಂತೆ ಭೂ ಸುಧಾರಣಾ ಕಾಯಿದೆ ಜಾರಿಗೆ ತರುವ ಮೂಲಕ ಭೂಮಿಯನ್ನು ಎಲ್ಲ ವರ್ಗಗಳ ಕೈಗೆ ಎಟಕುವಂತೆ ಮಾಡಿ ಮಾಲೀಕರನ್ನಾಗಿ ಮಾಡುವ ಪ್ರಯತ್ನ ಯಶಸ್ವಿ ಕಂಡಿತು.

ಭಾರತದಲ್ಲಿ ವರ್ಗ ಸಂಘರ್ಷ ಮಾತ್ರವೇ ಇಲ್ಲ, ಜೊತೆಗೆ ಜಾತಿ ಸಂಘರ್ಷವೂ ಇದೆ. ಈ ಜಾತಿ ಸಂಘರ್ಷದಲ್ಲಿ ಸಂವಿಧಾನ ಮತ್ತು ಚುನಾವಣೋತ್ತರದ ದಿನಗಳಲ್ಲೂ ಮೇಲ್ವರ್ಗದ ಜನರೇ ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ. ಈ ನಡುವೆಯೂ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಸಿಕ್ಕ ಸಾಂವಿಧಾನಿಕ ಅವಕಾಶಗಳನ್ನು ಬಳಸಿಕೊಂಡು ತಳಸಮುದಾಯದವರು ಮೇಲೆ ಬರಲು ಪ್ರಯತ್ನಿಸುತ್ತಿದ್ದಾರೆ. ತೋಟ ತುಡಿಕೆ, ವ್ಯವಹಾರ ಮತ್ತು ಆರ್ಥಿಕ ಹಿನ್ನೆಲೆ ಇವೆಲ್ಲವೂ ಮೇಲ್ವರ್ಗದವರ ಬಳಿಯೇ ಹೆಚ್ಚು ಸಂಗ್ರಹವಾಗಿದೆ. ತಳ ಸಮುದಾಯಗಳ ಬಳಿ ಈಗಲೂ ಭೂಮಿ ಇಲ್ಲ. ಇದ್ದರೂ ಅತೀ ಚಿಕ್ಕ ಹಿಡುವಳಿ. ಆಮಿಷ, ಬಡತನ, ಮಕ್ಕಳ ಶಿಕ್ಷಣ, ಆರೋಗ್ಯ ಇನ್ನಿತರ ಕಾರಣಗಳಿಗಾಗಿ ಆ ಭೂಮಿಯನ್ನು ಮಾರಿಕೊಡಿದ್ದಾರೆ. ಸ್ಥಿರವಾದ ಉದ್ಯೋಗವೂ ಇಲ್ಲ.

ಸ್ಟ್ರಗಲ್ ಪಾಲಿಟೀಶಿಯನ್:‌ ಈ ಎಲ್ಲದರ ನಡುವೆಯೂ ಸಾಮಾಜಿಕ ಸ್ಥಾನಮಾನದ ವಿಚಾರದಲ್ಲಿ ನೋವುಂಡು ಬದುಕು ಕಟ್ಟಿಕೊಳ್ಳಲು ಹೊರಟವರು ರಾಜಕಾರಣಕ್ಕೆ ಬಂದು ಚುನಾವಣೆ ಗೆಲ್ಲುವುದು ಅಷ್ಟು ಸುಲಭದ ಮಾತೇ? ಸಮಾಜವಾದಿ ಶಾಂತವೇರಿ ಗೋಪಾಲಗೌಡರು, ದೇವರಾಜ ಅರಸು, ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಸಿದ್ದರಾಮಯ್ಯ ಹೀಗೇ ಮಹಾನ್ ವ್ಯಕ್ತಿಗಳು ತಮ್ಮ ಪರಿಶ್ರಮದ ಮೂಲಕ ರಾಜಕಾರಣಕ್ಕೆ ಬಂದು ಎಲ್ಲ ಜಾತಿಯ ಬಡವರು, ನೊಂದವರ ಪರವಾಗಿ ಹಾಗೂ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಅಂಗವಿಕಲರು, ವೃದ್ಧರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಹೀಗೆ ವಿವಿಧ ವರ್ಗಗಳು, ಸಮುದಾಯಗಳಿಗೆ ಸುಭಿಕ್ಷ ಸಮಾಜವನ್ನು ಕಲ್ಪಿಸಿದ್ದಾರೆ. ಇವರ ಅಧಿಕಾರದ ಹಾದಿಯಲ್ಲಿ ಹೂವಿನ ದಳಗಳ ಸ್ವಾಗತವೇನೂ ಇರಲಿಲ್ಲ, ಕಲ್ಲು ಮುಳ್ಳುಗಳು ಮತ್ತು ಅಪಪ್ರಚಾರಗಳೇ ಹೆಚ್ಚಿಗೆ ಇದ್ದವು. ಕಲ್ಲು ಮುಳ್ಳುಗಳ ಹಿಂದಿರುವ ಕಾರಣ ಇವರೆಲ್ಲರೂ ಕೆಳಜಾತಿಗೆ ಸೇರಿದವರಾಗಿದ್ದರು ಎಂಬುದಾಗಿತ್ತು. ಇದಕ್ಕೆ ಕರ್ನಾಟಕ ರಾಜಕಾರಣದ ಇತಿಹಾಸ ಸಾಕ್ಷಿ. ಇಂತಹ ಸ್ಟ್ರಗಲ್ ಪಾಲಿಟಿಕ್ಸ್, ಜನಪರ ನಿಲುವು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸುವ ಮೇರು ವ್ಯಕ್ತಿತ್ವದ ರಾಜಕಾರಣಿ, ನೇರ ಮತ್ತು ನಿಷ್ಠುರವಾದಿ, ಸಹಕಾರ ಸಚಿವ ಕೆ.ಎನ್ ರಾಜಣ್ಣ ಸಮಾಜವಾದಿಗಳ ಸಾಲಿನಲ್ಲಿ ನಿಲ್ಲುತ್ತಾರೆ.

ರಾಜಕೀಯ ಎದುರಾಳಿ ಡಿಕೆಶಿ!: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135+1 ಸ್ಥಾನ ಪಡೆಯುವ ಮೂಲಕ ಅಭೂತಪೂರ್ವ ಯಶಸ್ಸು ಸಾಧಿಸಿ ಅಧಿಕಾರದ ಗದ್ದುಗೆ ಏರಿತು. ಆಗ ಶುರುವಾಗಿದ್ದು, ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆ. ಅಷ್ಟರಲ್ಲಿ ಸಿಎಂ ಗಾದಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಮುಸುಕಿನ ಪೈಪೋಟಿ ಶುರುವಾಗಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯನ್ನು ಶಾಸಕರು ಮತ್ತು ಹೈಕಮಾಂಡ್‌ಗೆ ಬಿಡುವ ಮೂಲಕ ಪ್ರಜಾಪ್ರಭುತ್ವವಾದಿ ಎನಿಸಿಕೊಂಡರು. ಆದರೆ, ಶಾಸಕರು ಬಾಯಿ ಬಿಡಬೇಕಲ್ಲಾ.. ಒಂದು ಕಡೆ ಸಿದ್ದರಾಮಯ್ಯರಂತಹ ಅನುಭವಿ ಮತ್ತು ಮುತ್ಸದ್ದಿ ರಾಜಕಾರಣಿ. ಇನ್ನೊಂದು ಕಡೆ ಸರ್ವಾಧಿಕಾರಿ ಧೋರಣೆ ಹೊಂದಿದ್ದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್!

ಸಿಎಂಗೆ ರಾಜಣ್ಣ ಎಂಬ ಊರುಗೋಲು: ಈ ಜುಗಲ್ಬಂಧಿಯಲ್ಲಿ ಮೊದಲು ಸಿದ್ದರಾಮಯ್ಯ ಪರ ಸಿಕ್ಸ್ ಹೊಡೆದದ್ದು ಮಾತ್ರ ಮಧುಗಿರಿ ಡೈನಾಮೈಟ್ ಕ್ಯಾತ್ಸಂದ್ರ ರಾಜಣ್ಣ. ಅವರು ಸಿದ್ದರಾಮಯ್ಯನೇ ಮುಖ್ಯಮಂತ್ರಿಯಾಗಲಿ, ನಾನು ಅವರಿಗೇ ಓಟ್ ಹಾಕಿದ್ದು ಎಂದು ಯಾರಿಗೂ ಅಂಜದೆ ತುಪಾಕಿ ಗುಂಡಿನಂತೆ ಬಹಿರಂಗವಾಗಿ ಹೇಳಿಬಿಟ್ಟಿದ್ದರು. ಸರ್ಕಾರ ರಚನೆಯಾಗಿ ಎರಡು ವರ್ಷಗಳು ಕಳೆಯುತ್ತಾ ಬಂದು ಸಿಎಂ ಬದಲಾವಣೆ ಚರ್ಚೆ ಎದ್ದಾಗಲೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರೇ.. ಸಿದ್ದರಾಮಯ್ಯನವರಿಗೆ ಮುಖ್ಯ ಊರುಗೋಲು. ಹೀಗಿರುವಾಗ ಮುಖ್ಯಮಂತ್ರಿ ಗಾದಿಗೆ ಕಣ್ಣಿಟ್ಟಿದ್ದ ಡಿ.ಕೆ.ಶಿವಕುಮಾರ್ ಕೆ.ಎನ್.ರಾಜಣ್ಣನಿಗೆ ರಾಜಕೀಯ ಎದುರಾಳಿ.

ಅಹಿಂದ ಸಮುದಾಯ ರಾಜಣ್ಣನೊಂದಿಗೆ ನಿಲ್ಲಲಿ:  ರಾಜಣ್ಣನನ್ನು ಹಣಿಯಲು ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಆತ ಸ್ಟ್ರಾಂಗ್ ಲಾಯರ್..! ಆದರೂ ಹಿಂಬಾಗಿಲ ಮೂಲಕ ಹಣಿಯಲು ರಾಜಕೀಯ ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಹಿಂದ ವರ್ಗದ ಜನ ಅವರೊಂದಿಗೆ ನಿಲ್ಲಬೇಕು. ರಾಜಣ್ಣ ಅವರೊಂದಿಗೆ ನಿಂತರೆ ದೇವರಾಜು ಅರಸು ಋಣ, ಸಿದ್ದರಾಮಯ್ಯರ ಅನ್ನದ ಋಣ ತೀರಿಸಿದಂತೆ. ಈಗ ರಾಜಣ್ಣ ಅವರ ಬೆಂಬಲಿಗರು ಹಾಗೂ ತಳ ಸಮುದಾಯಗಳು ಕೈ ಕಟ್ಟಿ ಕುಳಿತರೆ ನಿಮ್ಮ ಬೆಂಬಲ ನಾಯಿ ಮೊಲೆಯಲ್ಲಿನ ಹಾಲಿನಂತಾಗುತ್ತದೆ. ಎಂಎಲ್‌ಸಿ ರಾಜೇಂದ್ರ ಅವರ ಕೊಲೆಗೆ ಸಂಚು ರೂಪಿಸಿರುವ ಕುರಿತು ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಧುಗಿರಿ ಹಾಗೂ ತುಮಕೂರು ಜಿಲ್ಲೆಯ ಜನ ಚಕಾರ ಎತ್ತುತ್ತಿಲ್ಲವೇಕೆ? ಅವರ ಪರವಾಗಿ ಧ್ವನಿ ಏರಿಸಲಿಲ್ಲವೇಕೆ?

ಶೋಷಿತರ ರಾಜಕಾರಣ ಅಂತಿಮ!: ರಾಜಣ್ಣನಂತವರಿಗೇ ಹೀಗಾದರೆ ಮುಂದೆ ರಾಜಕಾರಣಕ್ಕೆ ಬರುವ ನಮ್ಮ ನಿಮ್ಮ ಮಕ್ಕಳ ಪಾಡೇನು? ದ್ವೇಷ ರಾಜಕಾರಣವನ್ನು ಕೊನೆಗೊಳಿಸದಿದ್ದರೆ ಅರ್ಥವಿಲ್ಲ. ಮಧುಗಿರಿಯ ಹಳ್ಳಿಗಳಲ್ಲಿ ಸಭೆಗಳನ್ನು ಕರೆದು ಪ್ರತಿಭಟನೆಗೆ ಸಜ್ಜು ಮಾಡಿ. ಇಲ್ಲದಿದ್ದರೆ ಮಧುಗಿರಿಯ ಜನ ಉಂಡ ತಟ್ಟೆಯೊಳಕ್ಕೆ ಉಚ್ಚೆ ಉಯ್ಯುವವರು ಎಂಬ ಅರ್ಥ ಬರುತ್ತದೆ. ಇಷ್ಟು ದಿನ ಅಲ್ಪಸಂಖ್ಯಾತ ಜನಪ್ರತಿನಿಧಿಗಳನ್ನು ಟಾರ್ಗೆಟ್ ಮಾಡಲಾಗಿತ್ತು. ಈಗ ಹಿಂದುಳಿದ ಮತ್ತು ದಲಿತ ಜನಪ್ರತಿನಿಧಿಗಳನ್ನು ಗುರಿ ಮಾಡಲಾಗುತ್ತಿದೆ. ಅಹಿಂದ ಸಮುದಾಯ ಒಂದಾಗದಿದ್ದರೆ ರಾಜಕಾರಣದಲ್ಲಿ ಉಳಿಗಾಲವಿಲ್ಲ. ಹೀಗೇ ತಳ ಸಮುದಾಯಗಳ ಆಲಸ್ಯ, ಪರಸ್ಪರ ಬೆಂಬಲಬಾಗಿ ನಿಲ್ಲದಿರುವ ಮನೋಭಾವ ಬೆಳೆದರೆ ಶೋಷಿತರ ರಾಜಕಾರಣ ಅಂತಿಮ ಸನಿಹದಲ್ಲಿದೆ.

ಅನುಕೂಲ ಪಡೆದವರ ಮೌನ: 
ರಾಜಣ್ಣ ಅವರ ಹೆಸರನ್ನು ಎಥೇಚ್ಛವಾಗಿ ಬಳಸಿಕೊಂಡು ಅನುಕೂಲ ಪಡೆದವರು ಕುರುಬರು. ಅವರು ಕೃತಜ್ಞತೆ ಇಲ್ಲದವರಾಗಿದ್ದಾರೆ. ಎಸ್ಟಿ ಸಮುದಾಯದವರಿಗೆ ನರಗಳಲ್ಲಿ ನಿಶ್ಯಕ್ತಿ, ಎಸ್ಸಿ ಸಮುದಾಯವಂತೂ ಚಕಾರ ಎತ್ತುತ್ತಿಲ್ಲ. ಎಲ್ಲ ತಳ ಸಮುದಾಯಗಳಿಗಿಂತಲೂ ಅತೀ ಹೆಚ್ಚು ಸಚಿವ ಕೆ.ಎನ್.ರಾಜಣ್ಣ ಅವರ ಹೆಸರನ್ನು ಬಳಸಿಕೊಂಡು ಲಾಭ ಪಡೆದುಕೊಂಡಿರುವ ಸಮುದಾಯಗಳಿವು. ಈಗ ಉಸಿರು ಹೊರಡಿಸುತ್ತಿಲ್ಲ. ಹಾಗಂತ ಇನ್ನಿತ ತಳ ಸಮುದಾಯಗಳೇನೂ ಮುನ್ನೆಲೆಗೆ ಬಂದು ನೈತಿಕ ಬೆಂಬಲವನ್ನೂ ನೀಡಿಲ್ಲ. ಹೀಗಾದರೆ ಒಡೆದಾಳುವವರಿಗೆ ನಾವೇ ವೀಳ್ಯ ಇತ್ತಂತೆ ಎಂಬುದನ್ನು ಮರೆಯಬಾರದು.
ರಾಜಣ್ಣನ ಋಣ ತೀರಿಸೋದು ಯಾವಾಗ? 
20 ವರ್ಷಗಳಲ್ಲಾಗಬೇಕಾದ ಅಭಿವೃದ್ಧಿಯ ಕೊಡುಗೆಯನ್ನು ಕೆ.ಎನ್.ರಾಜಣ್ಣ ಕೇವಲ 5 ವರ್ಷದಲ್ಲಿ ಮಧುಗಿರಿಗೆ ನೀಡಿಲ್ಲವೇ? ನಿಮ್ಮ ಮಧುಗಿರಿಯ ಹಳ್ಳಿ ಮಕ್ಕಳು ವಿದ್ಯುತ್ ಬೆಳಕಲ್ಲಿ ಓದುತ್ತಿಲ್ಲವೇ? ಬರಿಗಾಲಿನಲ್ಲಿ ನಡೆಯುತ್ತಿದ್ದ ನಿಮ್ಮ ಮಕ್ಕಳು ಇಂದು ಶಾಲೆಗೆ ಶೂ ಧರಿಸಿ ತೆರಳುತ್ತಿಲ್ಲವೇ? ಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆದು ತಂದ ಹಸು, ಕುರಿ, ಮೇಕೆಗಳು ಜಿಲ್ಲೆಯ ಜನರ ಮನೆಯನ್ನು ಬೆಳಗುತ್ತಿಲ್ಲವೇ? ಕಷ್ಟವೆಂದಾಗ ಕೆ.ಎನ್.ರಾಜಣ್ಣ ನಿಮ್ಮನ್ನು ಅಪ್ಪಿಕೊಂಡಿಲ್ಲವೇ? ಮತ್ಯಾಕೇ ಈ ಮೌನ? ಅದರಲ್ಲೂ ಮಧುಗಿರಿಯ ಜನ ಕುರುಡರಂತೆ ಇರುವುದು ಅಸಹ್ಯಕರ, ಜಿಲ್ಲೆಯ ಜನಕ್ಕೆ ನಾಚಿಕೆಗೇಡು. ರಾಜಣ್ಣ ಅವರ ಮೇಲೆ ಅಭಿಮಾನವಿದ್ದದ್ದೇ ಆದರೆ ಕೊನೇ ಪಕ್ಷ ಒಂದು ಪತ್ರಿಕಾಗೋಷ್ಠಿ ಕರೆದು ವಿರೋಧಿಗಳೆಗೆ ಎಚ್ಚರಿಕೆ ನೀಡಬೇಕಿತ್ತು. ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಘೋಷಣೆಯನ್ನಾದರೂ ಮಾಡಬೇಕಿತ್ತು. ಎಲ್ಲೋಯಿತು ಅಹಿಂದ ಒಗ್ಗಟ್ಟು? ಒಗ್ಗಟ್ಟು ಯುಗಾದಿ ಹಬ್ಬದ ಒಬ್ಬಟ್ಟಿನಂತೆ ಹೊಟ್ಟೆ ಸೇರಿತೇ?

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles