ಗುಬ್ಬಿ: ತಲ್ವಾರ್ ಹಿಡಿದು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಭೂಪನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆ ತಾಲ್ಲೂಕಿನಾದ್ಯಂತ ಖಂಡನೆ ವ್ಯಕ್ತವಾಗಿದೆ.
ಗುಬ್ಬಿ ಪಟ್ಟಣದಲ್ಲಿ ಯುವಕರಿಬ್ಬರು ಮಾರ್ಕೆಟ್ ರಸ್ತೆಯಲ್ಲಿ ಸ್ನೇಹಿತರೊಂದಿಗೆ ತನ್ನ ಹುಟ್ಟು ಹಬ್ಬವನ್ನು ಮಾರಕಾಸ್ತ್ರ ಹಿಡಿದು ಆಚರಿಸಿಕೊಂಡಿದ್ದಾನೆ. ತುಮಕೂರು ಜಿಲ್ಲೆಯಲ್ಲಿ ಸಮಾಜಘಾತುಕ ಕೃತ್ಯಗಳು ನಡೆಯುತ್ತಿವೆ ಎಂಬ ಸುದ್ದಿ ಕೆಲ ದಿನಗಳಿಂದ ಸದ್ದು ಮಾಡುತ್ತಿರುವುದು ಒಂದೆಡೆಯಾದರೆ, ಗುಬ್ಬಿ ಪಟ್ಟಣದಲ್ಲಿ ಯಾವುದೇ ಕಾನೂನಿನ ಭಯವಿಲ್ಲದೆ ಯುವಕನೊಬ್ಬ ರೌಡಿಯ ರೀತಿ ತಲ್ವಾರ್ ಹಿಡಿದು ಬಾಸ್ ಎಂಬ ಹೆಸರಿನ ಕೇಕ್ ಕತ್ತರಿಸುವ ದೃಶ್ಯವನ್ನು ವಿಡಿಯೋ ಮಾಡಿ ಆತನ ಸ್ನೇಹಿತರು ತಮ್ಮ ಸ್ಟೇಟಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಭಯದ ವಾತಾವರಣ ಸೃಷ್ಟಿಸಿರುವುದು ಮತ್ತೊಂದೆಡೆಯಾಗಿದೆ.
ಮರ್ಕೆಟ್ ರಸ್ತೆಯಲ್ಲಿ ಹುಟ್ಟು ಹಬ್ಬ ಆಯೋಜನೆ ಮಾಡಿದ ಯುವಕರು ಸ್ನೇಹಿತರಾದ ಶಾರುಖ್ ಹಾಗೂ ಮುಗಲ್ ಪಾಷ ಎಂಬ ಇಬ್ಬರು ಯುವ ಮುಖಂಡರ ಜನುಮ ದಿನ ಆಚರಣೆಯನ್ನು ಮಾಡಿದ್ದಾರೆ. ಈ ಪೈಕಿ ತಲ್ವಾರ್ ಬಳಸಿ ಕೇಕ್ ಕತ್ತರಿಸಿದ್ದು ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.