ಗುಬ್ಬಿ: ಪಟ್ಟಣದ ಹೊರ ವಲಯದ ಶ್ರೀ ಚಿದಂಬರಾಶ್ರಮದಲ್ಲಿ ಪ್ರತಿ ವರ್ಷದಂತೆ ಶ್ರೀ ದತ್ತ ಜಯಂತಿ ಆಚರಣಾ ವಿವಿಧ ಕಾರ್ಯಕ್ರಮಗಳು ಡಿ.15 ಮತ್ತು 16 ರಂದು ಜರುಗಲಿದೆ ಎಂದು ಆಶ್ರಮದ ಮುಖ್ಯಸ್ಥ ಸಚ್ಚಿದಾನಂದ ಶರ್ಮಾ ತಿಳಿಸಿದ್ದಾರೆ.
ಕಳೆದ ಒಂಭತ್ತು ದಶಕದಿಂದ ಗುರು ಕುಲ ಪದ್ಧತಿ ಅಳವಡಿಸಿಕೊಂಡು ವೇದ ಉಪನಿಷತ್ತು, ಸಂಸ್ಕೃತ ಭಾಷೆಯ ಕಲಿಕೆಗೆ ಆದ್ಯತೆ ನೀಡಿ ನಂತರದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಸರ್ವರಿಗೂ ಶಿಕ್ಷಣ ಒದಗಿಸುವ ಸದುದ್ದೇಶದಿಂದ ಶ್ರೀ ಚಿದಂಬರ ಸ್ವಾಮಿಗಳು ದತ್ತ ಕಲ್ಪವನ್ನು ಪರಿಶೋಧಿಸಿ ಈ ಆಶ್ರಮ ಆರಂಭಿಸಿದರು. ಇಲ್ಲಿ ಪ್ರತಿ ವರ್ಷ ದತ್ತಾತ್ರೇಯ ಹಾಗೂ ಆಂಜನೇಯ ಸ್ವಾಮಿಯ ಸಂಗಮದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಎರಡು ದಿನಗಳ ವಿವಿಧ ಕಾರ್ಯಕ್ರಮವು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ ಎಂದರು.
ಡಿಸೆಂಬರ್ 15 ರಂದು ದತ್ತ ಜಯಂತಿ ಅಂಗವಾಗಿ ಶ್ರೀ ದತ್ತಾಂಜನೇಯ ಸ್ವಾಮಿಗಳ ರಥೋತ್ಸವ ಮಧ್ಯಾಹ್ನ 12.30 ಕ್ಕೆ ನಡೆಯಲಿದೆ. ಸಂಜೆ 3.30 ಕ್ಕೆ ಶ್ರೀ ದತ್ತಾಂಜನೇಯ ಸ್ವಾಮಿಯ ಮೆರವಣಿಗೆ ಆಶ್ರಮದಿಂದ ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದವರೆಗೆ ವಿವಿಧ ಸಾಂಸ್ಕೃತಿಕ ಕಲಾ ಮೇಳದೊಂದಿಗೆ ನಡೆಯಲಿದೆ.
ಡಿಸೆಂಬರ್ 16 ರಂದು ಬೆಳಿಗ್ಗೆ 9 ಗಂಟೆಗೆ ಸಂಗೀತ ಕಾರ್ಯಕ್ರಮ ಹಾಗೂ ಸಾಮೂಹಿಕ ಲಲಿತಾ ಪೂಜಾ ಕಾರ್ಯಕ್ರಮ ಜರುಗಲಿದೆ. ಎಲ್ಲಾ ಮಹಿಳೆಯರು ಈ ಲಲಿತಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಶ್ರಮದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.