ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ರಾಜ್ಯ ಹೆದ್ದಾರಿ 33ರ ದೊಡ್ಡಮಾವತ್ತೂರು ಟೋಲ್ ಬಳಿ ಭೀಕರ ರಸ್ತೆ ದುರಂತದಿಂದ ಟೋಲ್ ಸಂಪೂರ್ಣ ಜಖಂ ಗೊಂಡಿರುವ ಘಟನೆ ಮಂಗಳವಾರ ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ನಡೆದಿದೆ.
ಟೋಲ್‌ನ ಇಬ್ಬರು ಹಾಗೂ ಡಿಸೇಲ್ ತುಂಬಿದ್ದ ಲಾರಿಯಲ್ಲಿದ್ದ ಚಾಲಕ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರು ಕ್ರಾಸ್‌ನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಮೃತೂರು ಸಿಪಿಐ ಮಾಧ್ಯನಾಯಕ್, ಹುಲಿಯೂರುದುರ್ಗ ಪಿಎಸ್‌ಐ ಪ್ರಶಾಂತ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೇಟಿ ನೀಡಿ ಸ್ಥಳದಲ್ಲಿನ ಪರಿಸ್ಥಿತಿ ನಿಯಂತ್ರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬೆಳಗಿನ ಜಾವ ಮೂರು ಗಂಟೆಯ ಸಮಯದಲ್ಲಿ ಕುಣಿಗಲ್ ಕಡೆಯಿಂದ ಬಂದ ಟೈಲ್ಸ್ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಟೋಲ್‌ಗೆ ಗುದ್ದಿದೆ ಬಳಿಕ ಮದ್ದೂರು ಕಡೆಯಿಂದ ಬಂದು ಟೋಲ್ ನಲ್ಲಿ ನಿಂತಿದ್ದ ಡಿಸೇಲ್ ತುಂಬಿದ್ದ ಲಾರಿಗೆ ಗುದ್ದಿ ಬಳಿಕ ಟೋಲ್ ಸಿಬ್ಬಂದ್ದಿ ಉಳಿದುಕೊಂಡಿದ್ದ ಕಚೇರಿಯೋಳಗೆ ನುಗ್ಗಿದೆ. ಅಪಘಾತದ ರಭಸಕ್ಕೆ ಟೋಲ್‌ಗೆ ಅಳವಡಿಸಿದ್ದ ಚಾವಣೆ ಮುರಿದು ಬಿದ್ದಿದ್ದರೆ, ಮತ್ತೊಂದು ಕಡೆಯಲ್ಲಿ ಬಯೋ ಡಿಸೇಲ್ ತುಂಬಿದ್ದ ಲಾರಿ ಪಲ್ಟಿಯಾಗಿ ಸಾವಿರಾರು ಲೀಟರ್ ಡೀಸೆಲ್ ಮಣ್ಣು ಪಾಲಾಗಿದೆ.
ಕೆಲ ಸ್ಥಳೀಯರು ಬಕೆಟ್ ಹಾಗೂ ಕ್ಯಾನ್‌ಗಳ ಮೂಲಕ ಡಿಸೇಲ್ ತುಂಬಿ ಹೊತ್ತೊಯ್ದರು. ಸ್ಥಳಕ್ಕೆ ಬಂದ ಹುಲಿಯೂರುದುರ್ಗ ಪೊಲೀಸರು ಅಪಘಾತದ ಸೂಕ್ಷ್ಮತೆ ಅರಿತು ತಕ್ಷಣ ವಿದ್ಯುತ್ತಿನ ಸಂಪರ್ಕ ಕಡಿತಗೊಳಿಸಿ, ಬಳಿಕ ಮೂರು ಕ್ರೇನ್‌ಗಳ ಮೂಲಕ ಎರಡು ಗಂಟೆಗಳ ಸಾಹಸದ ನಂತರ ಪೊಲೀಸರು ರಸ್ತೆ ತೆರವು ಮಾಡಿದರು. ಈ ವೇಳೆ ಒಂದು ಕಿ.ಮೀ ವರಗೆ ವಾಹನ ದಟ್ಟಣೆ ಉಂಟಾಗಿತ್ತು. ಅಪಘಾತದ ಬಳಿಕ ಟೈಲ್ಸ್ ತುಂಬಿದ್ದ ಲಾರಿಯ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಟೋಲ್ ಸಿಬ್ಬಂದಿಗಳ ಮಾಹಿತಿ ಪ್ರಕಾರ ಲಾರಿ ಚಾಲಕ ನಿದ್ರೆಯಲ್ಲಿದ್ದ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಟೋಲ್ ಸಿಬ್ಬಂದಿ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಅವೈಜ್ಞಾನಿಕ ಟೋಲ್ ಕಾಮಾಗಾರಿ: ರಾಜ್ಯ ಹೆದ್ದಾರಿ 33ರ ದೊಡ್ಡಮಾವತ್ತೂರು ಗ್ರಾಮದ ಬಳಿ ಇರುವ ಟೋಲ್ ನಿರ್ಮಾಣ ಅವೈಜ್ಞಾನಿವಾಗಿದ್ದು, ಇಲ್ಲಿ ಪದೇ ಪದೆ ಅಪಘಾತಗಳು ಸಂಭವಿಸುತ್ತಿವೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಕುಣಿಗಲ್ ಕಡೆಯಿಂದ ಟೋಲ್ ಕಡೆಗೆ ಬರುವ ವಾಹನಗಳು ದೊಡ್ಡಮಾವತ್ತೂರು ಬಳಿ ರಸ್ತೆ ತಗ್ಗು ಇರುವ ಕಾರಣ ಅತಿ ವೇಗವಾಗಿ ಬರುತ್ತವೆ. ಇದಲ್ಲದೆ ರಸ್ತೆಯ ತಿರುವಿನಲ್ಲಿ ಟೋಲ್ ನಿರ್ಮಿಸಲಾಗಿದೆ. ತಿರುವಿನಲ್ಲಿ ನಿರ್ಮಿಸಿರುವ ಟೋಲ್ ನನ್ನು ಸರಿಯಾದ ಕಡೆಗೆ ಸ್ಥಳಾಂತರಿಬೇಕು ಎಂದು ಚಾಲಕರು ಹಾಗೂ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ. ರಾಜ್ಯ ರಸ್ತೆ ಸುರಕ್ಷತ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಸಾರ್ವಜನಿಕರು ಸ್ಥಳೀಯರು ಆಗ್ರಹಿಸಿದ್ದಾರೆ.

ಹಣ ವಸೂಲಿ ಆರೋಪ: ಅಪಘಾತವಾದ ಬಳಿಕ ಎಚ್ಚೆತ್ತ ಕೆಶಿಫ್ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ಟೋಲ್ ಬಳಿ ರಸ್ತೆಯ ಎರಡು ಬದಿಯಲ್ಲಿ ಸಿಮೆಂಟ್ ಪೋಲ್ ಹಾಗೂ ಸುರಕ್ಷತಾ ಫಲಕಗಳನ್ನು ಅಳವಡಿಸುತ್ತಿರುವುದನ್ನು ಗಮನಿಸಿದರೆ ಕೆಶಿಫ್ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಟೋಲ್ ಸಂಗ್ರಹದ ಟೆಂಡರ್ ಮುಗಿದಿದ್ದರೂ ಸಹ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.