| ಶಿವಕುಮಾರ್ ಇಪ್ಪಾಡಿ
ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋವಿಂದಯ್ಯನಪಾಳ್ಯ ಗ್ರಾಮದ ಸರ್ಕಾರಿ ಶಾಲೆಯ ಅವರಣದಲ್ಲಿ ಶೌಚಾಲಯ ಹಾಗೂ ಅಡುಗೆಕೋಣೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷ ಕಳೆದರು ಇನ್ನೂ ಪೂರ್ಣಗೊಂಡಿಲ್ಲ. ತಾಲ್ಲೂಕಿನಾದ್ಯಂತ ಶಾಲೆಗಳು ಪ್ರಾರಂಭವಾಗಿ ಮೂರು ತಿಂಗಳು ಕಳೆಯುತ್ತಿದೆ. ಆದರೆ ಮಕ್ಕಳಿಗೆ ಬಳಸಲು ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದಂತಾಗಿದೆ.
ಕೆಲವು ಕಡೆ ಆರಂಭ ಆಗದ ಕಾಮಗಾರಿ: ತಾಲ್ಲೂಕಿನಾದ್ಯಂತ ಫ್ರೌಡಶಾಲೆ, ಎಚ್‌ಪಿಎಸ್ ಹಾಗೂ ಎಲ್‌ಪಿಎಸ್ ಸೆರಿದಂತೆ ಒಟ್ಟು 437 ಸರ್ಕಾರಿ ಶಾಲೆಗಳಿದ್ದು, 12 ಸಾವಿರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಸುಮಾರು 65 ಶಾಲೆಗಳಿಗೆ ಶೌಚಾಲಯವೇ ಇಲ್ಲದಂತಾಗಿದೆ. ಕೆಲವು ಕಡೆಯಲ್ಲಿ ನಿರ್ಮಾಣ ಹಂತದಲ್ಲಿ ಇದ್ದರೆ ಇನ್ನೂ ಕೆಲವು ಕಡೆಗಳಲ್ಲಿ ಕಾಮಗಾರಿಯೇ ಪ್ರಾರಂಭವಾಗಿಲ್ಲ. ಪ್ರತಿ ಶೌಚಾಲಯ ನಿರ್ಮಾಣಕ್ಕೆ 5 ಲಕ್ಷದ 20 ಸಾವಿರ ಅನುದಾನ ನಿಡಲಾಗುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2.60 ಲಕ್ಷ ಹಾಗೂ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಎರಡು ಇಲಾಖೆಯ 2.60 ಲಕ್ಷ ರೂ. ಅನುದಾನವನ್ನು ಒಗ್ಗೂಡಿಸಿ ಶೌಚಾಲಯ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಿರ್ವಹಣೆ ಇಲ್ಲದ ಶೌಚಾಲಯಗಳು: ಆದರೆ ಕಾಮಗಾರಿ ಅನುಷ್ಠಾನ ಮಾಡಬೆಕಿದ್ದ ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ಹಾಗೂ ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಯ ಅಭಿವೃದ್ದಿ ಅಧಿಕಾರಿಗಳ ನಿರ್ಲಕ್ಷದಿಂದ ಕಾರಣದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಬಯಲು ಶೌಚಾಲಯದಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಇದರಿಂದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರು ಹಾಗೂ ಶಿಕ್ಷಕರಿಗೆ ಸಮಸ್ಯೆಯಾಗಿದೆ. ಉಳಿದಂತೆ ಶೌಚಾಲಯ ಇರುವ ಶಾಲೆಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಗಬ್ಬೆದ್ದು ನಾರುತ್ತಿವೆ. ಮಕ್ಕಳು ಮೂಗು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.
ಪೂರ್ಣ ಪ್ರಮಾಣದ ಬಿಲ್: ಇನ್ನೂ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಹಲವು ಕಡೆಗಳಲ್ಲಿ ಶಾಲೆಗಳು ಸೊರುತ್ತಿದ್ದರೂ ಇನ್ನೂ ರಿಪೇರಿ ಕಂಡಿಲ್ಲ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯದ ಕೊರತೆಯ ಕಾರಣದಿಂದ ಶಾಲೆಯ ದಾಖಲಾತಿಯಲ್ಲೂ ಗಣನಿಯವಾಗಿ ಕುಸಿತ ಕಾಣುತ್ತಿದೆ. ಪಾಲಕರು, ಪೋಷಕರು ಖಾಸಗಿ ಶಾಲೆಗಳತ್ತ ಮುಖಮಾಡುತ್ತಿದ್ದಾರೆ. ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಾಣ ಕಾಮಾಗಾರಿ ಕೈಗೆತ್ತಿಕೊಂಡು ಎರಡು ವರ್ಷಗಳು ಕಳೆಯುತ್ತಾ ಬಂದಿದೆ. ಅನುದಾನವೂ ಬಿಡುಗಡೆಯಾಗಿದೆ. ಕೆಲವು ಕಡೆಗಳಲ್ಲಿ ಕಾಮಾಗಾರಿ ಪೂರ್ಣಗೊಳಿಸಿದ ನಂತರ ಹಂತ ಹಂತವಾಗಿ ಬಿಲ್ ಪಾವತಿ ಮಾಡುವ ಬದಲು ಕಾಮಾಗಾರಿ ಅಲ್ಪ ಪ್ರಮಾಣದಲ್ಲಿ ನಡೆದಿದ್ದರು ಸಹ ಅಧಿಕ ಬಿಲ್ ಪಾವತಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಪೋಷಕರ ಒತ್ತಾಯ: ಇದುವರೆಗೂ ಶೌಚಾಲಯ ನಿರ್ಮಾಣ ಕಾಮಾಗಾರಿ ಮಾತ್ರ ಪೂರ್ಣಗೊಂಡಿಲ್ಲ, ಮಕ್ಕಳಿಗೆ ಬಳಕೆಗೆ ಸಿಕ್ಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಕಾರಣದಿಂದಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶೌಚಾಲಯ ಇಲ್ಲದಂತಾಗಿದೆ. ಶಾಲೆಯ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಬಯಲು ಶೌಚಾಲಯಕ್ಕೆ ತೆರಳುವ ಮಕ್ಕಳಿಗೆ ಸಮಸ್ಯೆಯಾದರೆ ಇದರ ಹೊಣೆ ಹೊರುವವರು ಯಾರು? ಇನ್ನಾದರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸ ಬೇಕು ಎಂದು ಮಕ್ಕಳು ಹಾಗೂ ಪೋಷಕರ ಒತ್ತಾಯವಾಗಿದೆ.