ಶಿರಾ: ಸರ್ಕಾರಿ ಆಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಸ್ವಚ್ಛವಾದ ಪರಿಸರ ಇದ್ದರೆ ರೋಗರುಜಿನಗಳು ಬರುವುದಿಲ್ಲ ಎಂದು ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಹೇಳಿದರು.
ಅವರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಸೇವಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ಶಿರಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ತುಮಕೂರು ಜಿಲ್ಲೆಯಲ್ಲಿಯೇ ತಾಯಿ ಮತ್ತು ಮಕ್ಕಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ತಾಲೂಕಿನ ಅಕ್ಕಪಕ್ಕದ ತಾಲೂಕಿನ ಗರ್ಭಿಣಿಯರು, ನೆರೆಯ ಆಂಧ್ರಪ್ರದೇಶದಿಂದ ಗರ್ಭಿಣಿಯರು ಚಿಕಿತ್ಸೆಗೆ ಬರುತ್ತಾರೆ. ಶಾಸಕರಾದ ಟಿ.ಬಿ.ಜಯಚಂದ್ರ ಅವರು ಅತ್ಯುತ್ತಮ ಕಾರ್ಯ ಮಾಡಿದ್ದು ಶಿರಾ ತಾಲೂಕಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿಸಿ ನಿರ್ಮಿಸಿದ್ದಾರೆ. ಇದಕ್ಕೆ ತಾಲೂಕಿನ ಜನತೆ ಋಣಿಯಾಗಿರಬೇಕು ಎಂದರು.
ನಂತರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿದ್ದ ಸ್ಥಗಿತವಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪರಿಶೀಲಿಸಿ ಸಂಬಂಧಪಟ್ಟವರು ಕೂಡಲೇ ಇದನ್ನು ಮರು ಚಾಲನೆ ಮಾಡಬೇಕು ಎಂದು ತಿಳಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ.ಗೌಡ ಮಾತನಾಡಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ನಗರಸಭೆ ವತಿಯಿಂದ ಪ್ರತಿ ನಿತ್ಯ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಹಾಗೂ ನಗರಸಭೆ ವತಿಯಿಂದ ಆಸ್ಪತ್ರೆ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರಪ್ಪ, ಪೌರಾಯುಕ್ತ ರುದ್ರೇಶ್, ನಗರಸಭೆ ಸದಸ್ಯರಾದ ಅಜಯ್‌ಕುಮಾರ್, ನಗರಸಭೆ ಕಂದಾಯ ಅಧಿಕಾರಿ ಮಂಜುನಾಥ್, ಆರೋಗ್ಯ ನಿರೀಕ್ಷಕ ಜಗನ್ನಾಥ್, ಮುಖಂಡರಾದ ಮಜರ್ ಸಾಬ್, ಎಸ್.ಆರ್.ಹರೀಶ್ ಸೇರಿದಂತೆ ಹಲವರು ಹಾಜರಿದ್ದರು.