ತುಮಕೂರು: 2017 ಜನವರಿ 19ರ ಸರ್ಕಾರದ ತಿದ್ದುಪಡಿ ಆದೇಶದ ಪ್ರಕಾರ ಟೆಂಡರ್ ಜಾಹೀರಾತುಗಳನ್ನು ಮತ್ತು ಗ್ರಾಮ ಪಂಚಾಯಿತಿಗಳಿಂದ ಕೊಡುವ ಜಾಹೀರಾತುಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕವೇ ಮಾಧ್ಯಮ ಪಟ್ಟಿಯಲ್ಲಿರುವ ಸ್ಥಳೀಯ ದಿನಪತ್ರಿಕೆಗಳು ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ ಬಿಡುಗಡೆ ಮಾಡುವಂತೆ ಕೋರಿ ಸೋಮವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ/ಪ್ರಾದೇಶಿಕ/ರಾಜ್ಯ ಮಟ್ಟದ ಪತ್ರಿಕೆಗಳಿಗೆ ಸರ್ಕಾರದ ಟೆಂಡರ್ ಮತ್ತು ವರ್ಗೀಕೃತ ಜಾಹೀರಾತು ಬಿಡುಗಡೆಗೆ ಮಾರ್ಗಸೂಚಿವುಳ್ಳ 2017 ಜನವರಿ19ರ ಉಲ್ಲೇಖದ ತಿದ್ದುಪಡಿ ಆದೇಶವನ್ನು ಸರ್ಕಾರ ಹೊರಡಿಸಿದೆ. ಸರ್ಕಾರದ ವಿವಿಧ ಇಲಾಖೆಗಳ ಟೆಂಡರ್ ಮತ್ತು ವರ್ಗೀಕೃತ ಜಾಹೀರಾತು ಬಿಡುಗಡೆ ಮಾಡುವಾಗ ತಿದ್ದುಪಡಿ ಆದೇಶದಲ್ಲಿ ಸೂಚಿಸಿದ ಪ್ರಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ/ ಪ್ರಾದೇಶಿಕ/ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಸರ್ಕಾರದ ಎಲ್ಲಾ ಇಲಾಖೆಗಳು/ ನಿಗಮ/ ಮಂಡಳಿಗಳು/ ಪ್ರಾಧಿಕಾರಗಳು/ ಸ್ಥಳೀಯ ಸಂಸ್ಥೆಗಳು/ ಜಿಲ್ಲಾ ಪಂಚಾಯತ್/ ವಿಶ್ವವಿದ್ಯಾಲಯಗಳು ಆಯಾ ಜಿಲ್ಲೆಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಕಛೇರಿ ಮೂಲಕ ಬಿಡುಗಡೆ ಮಾಡಬೇಕು. ಆದರೆ ತುಮಕೂರು ಜಿಲ್ಲೆಯ ಅನೇಕ ಕಛೇರಿಗಳು ಈ ತಿದ್ದುಪಡಿ ಆದೇಶ ಉಲ್ಲಂಘಿಸಿ ನೇರವಾಗಿ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಟೆಂಡರ್ ಮತ್ತು ವರ್ಗೀವೃತ ಜಾಹೀರಾತುಗಳನ್ನು ಬಿಡುಗಡೆ ಮಾಡುತ್ತಿವೆ. ಇದರಿಂದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಟೆಂಡರ್ ಬಿಡುಗಡೆ ವಿಷಯದಲ್ಲಿ ತಾರತಮ್ಯ ಹಾಗೂ ಅನ್ಯಾಯವಾಗುತ್ತಿದೆ. ಈ ಕ್ರಮವು ಸರ್ಕಾರದ ತಿದ್ದುಪಡಿ ಆದೇಶಕ್ಕೆ ಸಂಪೂರ್ಣ ವಿರುದ್ದವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ ಮನವರಿಕೆ ಮಾಡಿಕೊಟ್ಟರು.
ಸರ್ಕಾರದ ತಿದ್ದುಪಡಿ ಆದೇಶದ ರೀತ್ಯಾ ತುಮಕೂರು ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ಕಛೇರಿಗಳು ತಮ್ಮ ಕಛೇರಿಗೆ ಸಂಬಂಧಿಸಿದ ಟೆಂಡರ್ ಮತ್ತು ವರ್ಗೀಕೃತ ಜಾಹೀರಾತುಗಳನ್ನು ಕಡ್ಡಾಯವಾಗಿ ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತುಮಕೂರು ಇವರ ಮೂಲಕ ಬಿಡುಗಡೆ ಮಾಡುವಂತೆ ಸೂಚನೆ ನೀಡಿ ಸುತ್ತೋಲೆ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಂಘದ ಸಂಘದ ಜಿಲ್ಲಾಧ್ಯಕ್ಷ ಜಿ.ಕರುಣಾಕರ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸೂಚಿಸುವುದಾಗಿ ಸಂಘದ ನಿಯೋಗಕ್ಕೆ ತಿಳಿಸಿದರು.
ಮನವಿ ಸ್ವೀಕರಿಸಿದ ಜಿಪಂ ಸಿಇಒ ಜಿ.ಪ್ರಭು ಅವರು, 2017ರ ಆದೇಶದ ಬಗ್ಗೆ ಪಿಡಿಒಗಳಿಗೆ ಮಾಹಿತಿ ಕೊರತೆ ಇರಬಹುದು, ಗ್ರಾಮ ಪಂಚಾಯ್ತಿಗಳಾಗಲೀ ಅಥವಾ ತಾಲ್ಲೂಕು ಪಂಚಾಯ್ತಿಗಳಾಗಲೀ ವಾರ್ತಾ ಇಲಾಖೆಯ ಮಾಧ್ಯಮಪಟ್ಟಿಯಲ್ಲಿ ಇಲ್ಲದಿರುವ ಪತ್ರಿಕೆಗಳಿಗೆ ಜಾಹಿರಾತುಗಳನ್ನು ನೀಡಿದರೆ ಜಾಹಿರಾತು ನೀಡಿದವರೇ ನೇರ ಹೊಣೆಗಾರರಾಗುತ್ತಾರೆ. ಆದುದರಿಂದ ವಾರ್ತಾ ಇಲಾಖೆಯ ಮಾಧ್ಯಮಪಟ್ಟಿಯಲ್ಲಿ ಎಷ್ಟು ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳಿವೆ ಎಂಬ ಮಾಹಿತಿಯನ್ನು ತರಿಸಿಕೊಂಡು ಕೂಡಲೇ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಆದೇಶ ಹೊರಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್.ಮಂಜುನಾಥ, ರಾಜ್ಯ ಜಂಟಿ ಕಾರ್ಯದರ್ಶಿ ಸಿ.ರಂಗನಾಥ, ಜಿಲ್ಲಾ ಉಪಾಧ್ಯಕ್ಷ ಪಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎನ್.ಮಹೇಶ್‌ಕುಮಾರ್, ನಿರ್ದೇಶಕ ಬಸವರಾಜು ಹಾಜರಿದ್ದರು.