ತುಮಕೂರು: ಜೆಡಿಎಸ್ ಮುಖಂಡನೋರ್ವನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ವರದಿಗಾರ ಮುದ್ದುರಾಜು ಡಿ.ಆರ್ ಅವರು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿಯವರಿಗೆ ಇಂದು ದೂರು ನೀಡಿದ್ದಾರೆ.

ವರದಿಗಾರ ಮುದ್ದುರಾಜು ಹಾಗೂ ಪತ್ನಿ ಸೌಭಾಗ್ಯಮ್ಮ ಅವರ ಮೇಲೆ ಜೆಡಿಎಸ್ ಮುಖಂಡ ಹಾಗೂ ಕುರಂಕೋಟೆ ಗ್ರಾಪಂ ಮಾಜಿ ಅಧ್ಯಕ್ಷೆ, ಜೆಡಿಎಸ್ ಬೆಂಬಲಿತ ಹಾಲಿ ಸದಸ್ಯೆ ಮಹಾದೇವಮ್ಮ ಮತ್ತು ಇನ್ನಿಬ್ಬರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೊರಟಗೆರೆ ತಾಲೂಕಿನ ದಾಸಲು ಕುಂಟೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿತ್ತು.

ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ನರೇಗಾ ಯೋಜನೆಯಡಿಯ ಬಾಕ್ಸ್ ಚರಂಡಿ ಕಾಮಗಾರಿಯನ್ನು ಜೆಸಿಬಿ ಬಳಸಿ ಮಾಡಲಾಗುತ್ತಿದೆ. ಅಲ್ಲದೆ ಕಳಪೆ ಗುಣಮಟ್ಟದ ಚರಂಡಿ ನಿರ್ಮಾಣ ಕುರಿತು ವರದಿಯೊಂದರ ಪ್ರೋಮೋ ಬಿಡಲಾಗಿತ್ತು. ಈ ಹಿನ್ನೆಲೆ `ನ್ಯಾಯಘರ್ಜನೆ2’ ವೆಬ್ ವರದಿಗಾರರಾದ ಮುದ್ದುರಾಜು ಡಿ.ಆರ್ ಅವರನ್ನು ಗುರಿಯಾಗಿಸಿ ಶನಿವಾರ ರಾತ್ರಿ 7.30ರ ವೇಳೆಗೆ ಕುರಂಕೋಟೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಮತ್ತು ಹಾಲಿ ಸದಸ್ಯೆ ಮಹಾದೇವಮ್ಮ ಹಾಗೂ ಪತಿ ಜೆಡಿಎಸ್ ಬೆಂಬಲಿತ ರಂಗರಾಜು ಮತ್ತು ಇತರರು ರಾತ್ರಿ ವೇಳೆ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಜೊತೆಗೆ ಕೊಲೆ ಪ್ರಯತ್ನ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವರದಿಗಾರ ಮುದ್ದುರಾಜು ಮತ್ತು ಪತ್ನಿ ಸೌಭಾಗ್ಯಮ್ಮ ಅವರು ವಿಡಿಯೋ ಸಮೇತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೋಮವಾರ ದೂರು ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಸ್ಪಿ ಅವರು ಭರವಸೆ ನೀಡಿದ್ದಾರೆ. ನಾವು ಆರೋಪಿ ರಂಗರಾಜು ಅವರ ವಿರುದ್ಧ ನೀಡುವ ದೂರನ್ನು ತಡೆಯಲು ಹಾಗೂ ಬೆದರಿಸಲು ನಮ್ಮ ವಿರುದ್ಧವೇ ಅನ್ಯರೊಬ್ಬರಿಂದ ಸುಳ್ಳು ಅಟ್ರಾಸಿಟಿ ದಾಖಲಿಸಲು ಯತ್ನಿಸುತ್ತಿರುವುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಹೋಗಲಾಗಿದ್ದು, ಅದಕ್ಕೆ ಅಂಜುವ ಅಗತ್ಯವಿಲ್ಲ. ತಪ್ಪು ಯಾರೇ ಮಾಡಿದ್ದರೂ ಕ್ರಮ ಖಂಡಿತವಾಗಿ ಆಗಲಿದೆ. ಸಂಬಂಧಿಸಿದ ಠಾಣಾಧಿಕಾರಿಗೆ ಸೂಚಿಸಿದ್ದೇನೆ ಎಂದು ಅವರು ಭರವಸೆ ನೀಡಿದರು ಎಂದು ವರದಿಗಾರ ಮುದ್ದುರಾಜು ಅವರು ಹೇಳಿಕೆ ನೀಡಿದರು.
ವಿಶೇಷ ಸೂಚನೆ ಸುದ್ದಿ:
ಸುಳ್ಳು ದೂರು ಕೊಡೋ ಮುನ್ನ ಹುಷಾರು! ದೂರುದಾರರ ಮೇಲೆ ಪೊಲೀಸರ ಕ್ರಮ ಗ್ಯಾರಂಟಿ
ತಮಗಾಗದವರ ವಿರುದ್ಧ ಸುಳ್ಳು ದೂರುಗಳನ್ನು ನೀಡಿ ಮತ್ತೊಬ್ಬರಿಗೆ ತೊಂದರೆ ನೀಡುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಯಾವುದೇ ಪ್ರಕರಣ ದಾಖಲಾದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಸಂಗ್ರಹಿಸಲಾಗುತ್ತಿದೆ. ಸಾಕ್ಷಿಗಳ ಹೇಳಿಕೆ ಪಡೆದುಕೊಳ್ಳುವುದು, ಘಟನಾ ಸ್ಥಳದ ಪಂಚನಾಮೆ ಮತ್ತು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಜಪ್ತಿ ಮಾಡಿದ ವಸ್ತುಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಸತ್ಯಾ ಸತ್ಯತೆ ಪರಿಶೀಲನೆ ಮಾಡಲಾಗುತ್ತದೆ. ಸಿಸಿ ಕ್ಯಾಮೆರಾ ಪರಿಶೀಲನೆ, ಪ್ರತ್ಯಕ್ಷ/ಪರೋಕ್ಷ ಸಾಕ್ಷಿಗಳ ವಿಚಾರಣೆ ಮಾಡಿ ಹೇಳಿಕೆ ಪಡೆಯಲಾಗುತ್ತದೆ.
ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಸುಳ್ಳು ದೂರುಗಳನ್ನು ಕೊಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ತಮಗಾಗದವರ ವಿರುದ್ಧ ಸುಳ್ಳು ದೂರುಗಳನ್ನು ನೀಡಿ ದಾರಿ ತಪ್ಪಿಸುವವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.
ಮಾರ್ಚ್ ನಲ್ಲಿ ಸದನದಲ್ಲೂ ಈ ವಿಚಾರ ಚರ್ಚೆಗೆ ಬಂದಿದ್ದು, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಅವರು ಈ ಬಗ್ಗೆ ಚುಕ್ಕೆ ಗುರುತಿಲ್ಲದ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಗೃಹ ಸಚಿವರು, ಸುಳ್ಳು ದೂರು ನೀಡಿದಲ್ಲಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಇತ್ತೀಚಿಗೆ ಸುಳ್ಳು ದೂರುಗಳು ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ ಎಷ್ಟು ಸುಳ್ಳು ದೂರುಗಾರರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ? ಎಂದು ಪ್ರಶ್ನೆ ಕೇಳಿದರು.
ಇದಕ್ಕೆ ಉತ್ತರ ನೀಡಿರುವ ಗೃಹ ಸಚಿವರು, “ಸುಳ್ಳು ದೂರುಗಳು ರಾಜ್ಯದಲ್ಲಿ ಇತ್ತೀಚೆಗೆ ದಾಖಲಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಸುಳ್ಳು ದೂರುದಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ ಎಂಬ ಕುರಿತು ರಾಜ್ಯದ ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ.