ಗುಬ್ಬಿ: ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ಸ್ಥಾಪಿತವಾಗಿದ್ದು, ಜಿಲ್ಲೆಯ ಯಾವುದೇ ಭಾಗದಲ್ಲಾಗಲೀ ಜನರಿಗೆ ತೊಂದರೆ ಆದರೆ ಕೂಡಲೇ ಸಮಿತಿ ವತಿಯಿಂದ ದಮನಿತರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ಜಿಲ್ಲಾಧ್ಯಕ್ಷ ಶೇಕ್ ಅನ್ಸರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಹಾಗೂ ಜನರ ಜಾಗೃತಿ ಸಭೆ ಕುರಿತು ಮಾತನಾಡಿದ ಅವರು, ಸಾಮಾಜಿಕ ಪಿಡುಗುಗಳಿಂದ ಜನರನ್ನು ರಕ್ಷಿಸುವ ಉತ್ತಮ ಸಮಿತಿ ಇದಾಗಿದೆ ಎಂದರು.
ಕಾನೂನು ಸಲಹೆಗಾರ ಚೇಳೂರು ಪ್ರವೀಣ್ ಗೌಡ ಮಾತನಾಡಿ, ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆದು ಬಾಲಕಾಮಿಕ ಪದ್ಧತಿ, ಬಾಲ್ಯ ವಿವಾಹ ಸೇರಿದಂತೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ನಿರಂತರವಾಗಿ ಹೋರಾಡುವ ಮೂಲಕ ಶಾಲಾ ಕಾಲೇಜುಗಳಲ್ಲಿ, ಗ್ರಾಮಗಳಲ್ಲಿ ಜನರಿಗೆ ಜಾಗೃತಿ ಮೂಡಿಸಿ ಸಮ ಸಮಾಜ ನಿರ್ಮಾಣ ಮಾಡುವ ಉದ್ದೇಶಗಳನ್ನು ಸಮಿತಿ ಒಳಗೊಂಡಿದೆ ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಮಂಚಲ ದೊರೆ ರಮೇಶ್ ಮಾತನಾಡಿ, ನನ್ನನ್ನು ಗುರುತಿಸಿ ತಾಲೂಕ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ರಾಜ್ಯಾಧ್ಯಕ್ಷ ಸಂತೋಷ್ ರವರಿಗೆ ಹಾಗೂ ಜಿಲ್ಲಾ ಮಟ್ಟದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸುತ್ತೇನೆ. ಸಮಿತಿ ವತಿಯಿಂದ ಆರೋಗ್ಯ ಶಿಬಿರ, ಮಕ್ಕಳಿಗೆ ಕಾನೂನಿನ ಅರಿವು ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಗೌರವಾಧ್ಯಕ್ಷ ಹನುಮಂತರಾಯಪ್ಪ, ಕಾರ್ಯದರ್ಶಿ ಶೇಕ್ ಮಹಮ್ಮದ್, ಮಹಿಳಾ ಘಟಕದ ಸಾನಿಯ ಕೌಸರ್, ಮಂಜುಳ ಎಂ, ಅಂಜಲ, ವಿಕಾಸ್ ಮುಂತಾದವರಿದ್ದರು.