ತುಮಕೂರು: ಜಿಲ್ಲಾಡಳಿತ ವತಿಯಿಂದ ನವೆಂಬರ್ 18ರಂದು ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕನಕದಾಸರ ವಿಚಾರಧಾರೆ ಮತ್ತು ಅವರ ಜೀವನ ಕುರಿತು ತಿಳಿಸುವಂತೆ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜನೆ ಮಾಡಬೇಕು. 10 ಮಂದಿ ಸಮುದಾಯದ ಸಾಧಕರನ್ನು ಗುರುತಿಸಿ ಸನ್ಮಾನಿಸಲು ಮತ್ತು ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲು ಸಮಿತಿಯನ್ನು ರಚಿಸುವಂತೆ ಸೂಚನೆ ನೀಡಿದರು.
ನಗರದ ಶಿರಾಗೇಟ್ ಬಳಿಯಲ್ಲಿರುವ ಕನಕ ಪುತ್ಥಳಿ ಹಾಳಾಗಿದ್ದು, ದುರಸ್ಥಿಗೊಳಿಸುವಂತೆ ಸಮುದಾಯದ ಮುಖಂಡರು ಬೇಡಿಕೆ ಇಟ್ಟರು. ಪುತ್ಥಳಿಯನ್ನು ದುರಸ್ಥಿಗೊಳಿಸಿ ಜಯಂತಿ ದಿನದಂದು ಶೃಂಗಾರಗೊಳಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವೇದಿಕೆ ಕಾರ್ಯಕ್ರಮದ ಮುನ್ನ ನಗರದ ಶಿರಾ ಗೇಟ್, ದಿಬ್ಬೂರು ಸೇರಿದಂತೆ ವಿವಿಧ ಭಾಗಗಳಿಂದ ಮೆರವಣಿಗೆ ಆಗಮಿಸುವುದರಿಂದ ಮೆರವಣಿಗೆಗೆ ವಿವಿಧ ಕಲಾ ತಂಡಗಳನ್ನು ಕರೆತರುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ ಅವರಿಗೆ ಸೂಚಿಸಿದರು.
ನ.11ರಂದು “ವೀರರಾಣಿ ಒನಕೆ ಓಬವ್ವ ಜಯಂತಿ” ಜಿಲ್ಲಾಡಳಿತದ ವತಿಯಿಂದ ನವೆಂಬರ್ 11ರಂದು ನಗರದ ಡಾ: ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ “ವೀರರಾಣಿ ಒನಕೆ ಓಬವ್ವ ಜಯಂತಿ” ಕಾರ್ಯಕ್ರಮ ಆಚರಿಸಲಾಗುತ್ತದೆ. ವೀರರಾಣಿ ಒನಕೆ ಓಬವ್ವ ಅವರ ಭಾವಚಿತ್ರವನ್ನು ವಿವಿಧ ಕಲಾ ತಂಡಗಳೊಂದಿಗೆ ನಗರದ ಬಿ.ಜಿ.ಎಸ್. ವೃತ್ತದಿಂದ ಮೆರವಣಿಗೆ ನಡೆಸಲಾಗುತ್ತದೆ. ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಸಮುದಾಯದ ತಲಾ 5 ವಿದ್ಯಾರ್ಥಿಗಳು ಹಾಗೂ 10 ಜನ ಸಮುದಾಯದ ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು ಎಂದು ತಿಳಿಸಿದರು.
ನಗರದ ಪ್ರಮುಖ ಸ್ಥಳದಲ್ಲಿ ಒನಕೆ ಓಬವ್ವ ಅವರ ಪುತ್ಥಳಿ ನಿರ್ಮಿಸುವಂತೆ ಹಾಗೂ ರಾಜ್ಯದ 50 ವಸತಿ ಶಾಲೆಗಳಿಗೆ ವೀರರಾಣಿ ಒನಕೆ ಓಬವ್ವ ಹೆಸರನ್ನು ನಾಮಕರಣ ಮಾಡುವಂತೆ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಸಮುದಾಯದ ವಿವಿಧ ಮುಖಂಡರು ಸೇರಿದಂತೆ ಅಧಿಕಾರಿಗಳು, ಮತ್ತಿತರರು ಹಾಜರಿದ್ದರು.