ತುಮಕೂರು: ಹೊಸ ಶಿಕ್ಷಣ ನೀತಿ-2020 ಬಂದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಈ ಬದಲಾವಣೆಗೆ ಅಗತ್ಯ ತಯಾರಿ ಮಾಡಿಕೊಂಡರಷ್ಟೇ ಸವಾಲುಗಳನ್ನು ಎದುರಿಸಿ, ನಿಲ್ಲಲ್ಲು ಸಾಧ್ಯ ಎಂದು ಬೆಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ.ಎಸ್.ಆರ್.ಕೇಶವ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸರಕಾರಿ ಪ್ರಥಮ ದರ್ಜೆಕಾಲೇಜು ಹಾಗೂ ಸರಕಾರಿ ಸಂಜೆ ಪ್ರಥಮದರ್ಜೆ ಕಾಲೇಜುವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ಎನ್.ಎಸ್.ಎಸ್, ಸೇರಿದಂತೆ ವಿವಿಧ ಘಟಕಗಳ ಚಟುವಟಿಕೆಗಳ ಸಂಭ್ರಮ-2024 ಹಾಗೂ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ತಂತ್ರಜ್ಞಾನದ ಬಳಕೆಯಿಂದ ಗುತ್ತಿಗೆದಾರ, ಅಡಿಟರ್ ಸೇರಿದಂತೆ ಸುಮಾರು 40ರಷು ಹುದ್ದೆಗಳು ತನ್ನ ಅಸ್ಥಿತ್ವ ಕಳೆದುಕೊಳ್ಳಲಿವೆ. ಮುಂದಿನ ಮೂರು ವರ್ಷದ ನಂತರ ಪದವಿ ಪಡೆದ ಬರುವ ನೀವುಗಳು, ಈ ಸವಾಲನ್ನು ಸ್ವೀಕರಿಸಲು ಅಗತ್ಯವಿರುವ ತಯಾರಿ ಮಾಡಿಕೊಂಡರೆ ಮಾತ್ರ ಪೈಪೋಟಿಯುತ ಜಗತ್ತಿನಲ್ಲಿ ಉಳಿಯಲು ಸಾಧ್ಯ.ಹಾಗಾಗಿ ಈಗಿನಿಂದಲೇ ತಯಾರಿ ನಡೆಸಿ ಎಂದು ಸಲಹೆ ನೀಡಿದರು.
ಹೊಸ ಶಿಕ್ಷಣ ನೀತಿ ಬಂದ ನಂತರ ಪಠ್ಯ ಮತ್ತು ಪಠ್ಯೇತರದ ನಡುವಿನ ಅಂತರ ಕುಸಿದಿದೆ.ಎರಡು ಒಂದೇ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ.ಹೊಟ್ಟೆಯ ಹಸಿವಿನ ಬಗ್ಗೆ ನಮಗೆ ತಿಳಿಯುತ್ತದೆ.ಆದರೆ ಮೆದುಳಿನ ಹಸಿವಿನ ಅರಿವು ನಮಗೆ ಇರುವುದಿಲ್ಲ.ನಾವು ಸಾಧ್ಯವಾದಷ್ಟು ಮೆದುಳಿನ ಹಸಿವನ್ನು ತುಂಬಿಸುವ ಕಡೆಗೆ ಹೆಚ್ಚಿನ ಗಮನಹರಿಸಬೇಕಿದೆ.ಇಂದು ನಾನು ಏನಾಗಿದ್ದೇನೆ. ಎನಾಗಬಹುದಿತ್ತು ಎಂಬುದನ್ನು ಪದೆ ಪದೇ ಕೇಳಿಕೊಳ್ಳಬೇಕಾಗಿದೆ.ನನ್ನ ಸಾಮರ್ಥ್ಯಕ್ಕೆ ತಕ್ಕದಾಗಿ ನಾನು ಕಲಿಯುತಿದ್ದೇನೆಯೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ. ಸ್ಟೂಡೆಂಟ್ ಲೈಪ್ ಈಸ್ ಗೋಲ್ಡನ್ ಲೈಫ್ ಎನ್ನುವ ಮಾತಿದೆ.ಆದರೆ ನಾವು ಸರಿಯಾಗಿ ಪ್ಲಾನ್ ಮಾಡಿದಾಗ ಮಾತ್ರ ಆ ಮಾತು ನಿಜವಾಗುತ್ತದೆ.ಎಲ್ಲದಕ್ಕೂ ಮಾರ್ಕೆಟ್ ಇದೆ. ಆದರೆ ಅದನ್ನು ಯಾವ ರೀತಿಯಲ್ಲಿ ಬಳಕೆ ಮಾಡಬೇಕು ಎಂಬುದನ್ನು ನೀವು ಕಾಲೇಜಿನಲ್ಲಿ ಕಲಿಯಬೇಕಾಗಿದೆ ಎಂದು ಪ್ರೊ.ಕೇಶವ್ ನುಡಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿ,ಕಾಲೇಜಿನಲ್ಲಿ ಬಹುತೇಕ ಗ್ರಾಮೀಣ ಭಾಗದಿಂದ ಬಂದ ವಿದ್ಯಾರ್ಥಿಗಳಿದ್ದೀರಿ,ಜಾನಪದ ಕಲೆಯ ಬಗ್ಗೆ ಸಣ್ಣ ಅರಿವಾದರೂ ನಿಮಗೆ ಇರುತ್ತದೆ.ಹಾಗಾಗಿ ನೀವು ಬೆಳೆಯುವುದರ ಜೊತೆಗೆ, ಜಾನಪದ ಕಲೆಯನ್ನು ಬೆಳೆಸಿ, ತಲತಲಾಂತರದಿಂದ ಜನರಿಂದ ಜನರಿಗೆ ಹರಿದು ಬಂದ ಕಲೆ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ಡಿ.ವಸಂತ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಸ್ನೇಹಿಯಾಗಿದ್ದು, ಮಕ್ಕಳಲ್ಲಿರುವ ಎಲ್ಲಾ ರೀತಿಯ ಪ್ರತಿಭೆಯನ್ನು ಹೊರತರಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ. ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕೆಂದರು.
ಪ್ರಸ್ತಾವಿಕ ನುಡಿಗಳಾನ್ನಡಿದ ಅರ್ಥಶಾಸ್ತ್ರ ಪ್ರಾಧ್ಯಾಪಕ ತಿಪ್ಪೇಸ್ವಾಮಿ ಮಾತನಾಡಿ, ಕಾಲೇಜಿನ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತಯಾರು ಮಾಡುವ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ಕರೆಯಿಸಿ ಉಪನ್ಯಾಸ ಕೊಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಅನುಮಾನಗಳಿಗೆ ಉತ್ತರ ದೊರಕಿಸುವ ಪ್ರಯತ್ನ ಮಾಡಲಾಗುತ್ತಿದೆ.ಇಂದು ಅರ್ಥಶಾಸ್ತ್ರ ಪ್ರೊ.ಕೇಶವ ಅವರ ಉಪನ್ಯಾಸ ಅದರ ಒಂದು ಭಾಗವಾಗಿದೆ ಎಂದರು.
ವೇದಿಕೆಯಲ್ಲಿ ಅಂತರರಾಷ್ಟ್ರೀಯ ಅಥ್ಲೇಟಿಕ ಕ್ರೀಡಾಪಟು ಗುರುಪ್ರಸಾದ್, ಧೀರ ಭಗತ್ರಾಯ್ ಚಿತ್ರ ತಂಡದ ಕಲಾವಿದರು,ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಮುದ್ದುರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.