ತುಮಕೂರು| ಜ.26ರಂದು ಜಿಲ್ಲೆಯ 1500 ಉದ್ಯೋಗಾರ್ಥಿಗಳಿಗೆ ನೇಮಕಾತಿ ಆದೇಶ – ಶುಭ ಕಲ್ಯಾಣ್

ತುಮಕೂರು : ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಸುಮಾರು 1500 ಉದ್ಯೋಗಾರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವಿಶ್ವವಿದ್ಯಾನಿಲಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ತುಮಕೂರು ವಿಶ್ವವಿದ್ಯಾನಿಲಯದ ಡಾ.ಪಿ. ಸದಾನಂದಮಯ್ಯ ಬ್ಲಾಕ್‌ನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ-2025ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಜಿಲ್ಲೆಯ ಸುಮಾರು 1500 ಉದ್ಯೋಗಾಕಾಂಕ್ಷಿಗಳಿಗೆ ಜನವರಿ 26ರಂದು ಜಿಲ್ಲಾ ಉಸ್ತುವಾರಿ ಸಚಿವರು ನೇಮಕಾತಿ ಆದೇಶ ನೀಡಲಿದ್ದಾರೆ ಎಂದು ತಿಳಿಸಿದರು.

ಇತ್ತೀಚೆಗಷ್ಟೆ ಕಾರ್ಯ ನಿಮಿತ್ತ ಮಧುಗಿರಿ ತಾಲ್ಲೂಕಿನ ಗ್ರಾಮವೊಂದಕ್ಕೆ ಭೇಟಿ ನೀಡಿದಾಗ ಯುವಕರ ತಂಡವೊಂದು ಮೊಬೈಲ್ ವೀಕ್ಷಿಸುತ್ತಾ, ಕಾಲ ಕಳೆಯುತ್ತಿದ್ದುದನ್ನು ಕಂಡು ವಿಚಾರಿಸಿದಾಗ ಯುವಕರೆಲ್ಲರೂ ಪದವಿ ಹೊಂದಿರುವ ವಿಚಾರ ತಿಳಿದು ಬಂದಿತು. ಪದವೀಧರರಾಗಿದ್ದರೂ ನಿರುದ್ಯೋಗಿಗಳಾಗಿರುವುದನ್ನು ಮನಗಂಡು ಶಿಕ್ಷಣ ಪೂರ್ಣಗೊಳಿಸಿರುವ ಯುವಕರಿಗಾಗಿ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆತಾಗ ಮಾತ್ರ ಉದ್ಯೋಗ ಮೇಳ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸೇರಿ ಮತ್ತಿತರ ಇಲಾಖೆ, ಸಂಘ ಸಂಸ್ಥೆಗಳು ಮೇಳದ ಆಯೋಜನೆಗೆ ಶ್ರಮಿಸಿದ್ದು, ನಿರೀಕ್ಷೆಗೂ ಮೀರಿ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಓದನ್ನು ಪೂರ್ಣಗೊಳಿಸಿದವರು ಸರ್ಕಾರಿ ಉದ್ಯೋಗವನ್ನೇ ಕಾಯದೆ ಖಾಸಗಿ ಉದ್ಯೋಗ ಪಡೆದು ಸ್ವಂತ ಕಾಲಿನ ಮೇಲೆ ನಿಲ್ಲಬೇಕು. ಓದಿದ ಮಕ್ಕಳು ಹೆತ್ತವರಿಗೆ ಭಾರವಾಗಬಾರದು. ಇಂತಹ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಅವಕಾಶವನ್ನು ಗಿಟ್ಟಿಸಿಕೊಳ್ಳಬೇಕು. ಕಡಿಮೆ ವೇತನವೆಂದು ಹಿಂದೆ ಸರಿಯದೆ ದೊರೆತ ಮೊದಲ ಅವಕಾಶವನ್ನು ಬಳಸಿಕೊಳ್ಳುವುದರಲ್ಲಿ ಜಾಣತನವಿದೆ ಎಂದು ತಿಳಿಸಿದರು.

ಮೇಳದಲ್ಲಿ ಸುಮಾರು 92 ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು, ಹುದ್ದೆಗೆ ಆಯ್ಕೆಯಾದವರು ಮಧ್ಯದಲ್ಲಿಯೇ ಬಿಡದೆ ಕೌಶಲ್ಯದಿಂದ ಕೆಲಸ ಮಾಡಬೇಕು. ಹುದ್ದೆ ಸಣ್ಣದಿರಲಿ, ದೊಡ್ಡದಿರಲಿ ಸಮರ್ಪಣಾ ಭಾವದಿಂದ ಕೆಲಸ ಮಾಡಿದಾಗ ಗೆಲವು ಖಂಡಿತ ಎಂದು ಮಾರ್ಮಿಕವಾಗಿ ನುಡಿದರು.

ಗ್ರಾಮೀಣರಿಗೂ ಉದ್ಯೋಗ ದೊರೆಯಬೇಕೆಂಬ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿಯೂ ಉದ್ಯೋಗ ಮೇಳ ಆಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳಲು ಕಾರಣವಾಗಿದೆ ಎಂದರಲ್ಲದೆ, ದೇಶದ ಅಭಿವೃದ್ಧಿಗೆ ಯುವ ಜನತೆ ಸೋಮಾರಿಗಳಾಗದೆ ಯಾವುದಾದರೂ ಉತ್ತಮ ಉದ್ಯೋಗ ಹೊಂದುವುದು ಸೂಕ್ತವೆಂದು ಕಿವಿಮಾತು ಹೇಳಿದರು.

ವಿಶ್ವವಿದ್ಯಾನಿಲಯದ ಕುಲಸಚಿವ ನಾಹಿದಾ ಜûಮ್ ಜûಮ್ ಮಾತನಾಡಿ, ಜಿಲ್ಲಾಡಳಿತದಿಂದ ಯುವ ಉದ್ಯೋಗಾರ್ಥಿಗಳಿಗಾಗಿ ಮೇಳ ಆಯೋಜಿಸಿರುವುದು ಅಭಿನಂದನಾರ್ಹವಾಗಿದೆ. ಎಷ್ಟೋ ಕಂಪನಿಗಳಲ್ಲಿ ಕೌಶಲ್ಯದ ಕೊರತೆಯಿಂದ ಹುದ್ದೆಗಳು ಖಾಲಿಯಿವೆ. ತರಗತಿಯಲ್ಲಿ ಉತ್ತಮ ಅಂಕಗಳಿಸುವುದಷ್ಟೆ ಉದ್ಯೋಗ ಪಡೆಯಲು ಕಾರಣವಾಗುವುದಿಲ್ಲ. ಈ ನಿಟ್ಟಿನಲ್ಲಿ ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಕೌಶಲ್ಯ ತರಬೇತಿಯನ್ನೂ ನೀಡಬೇಕು. ಮೇಳದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಉದ್ಯೋಗದಾತರಿಗೆ ಮನವಿ ಮಾಡಿದರು.

ವಿಶ್ವವಿದ್ಯಾನಿಲಯದ ಉದ್ಯೋಗ ನಿಯೋಜನಾಧಿಕಾರಿ ಪ್ರೊ: ಪರಶುರಾಮ ಕೆ.ಜಿ., ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು ಮಾತನಾಡಿದರು.

ಜಿಲ್ಲಾ ಉದ್ಯೋಗಾಧಿಕಾರಿ ಕಿಶೋರ್ ಕುಮಾರ್, ಎಸ್‌ಬಿಐ ಆರ್‌ಸೆಟಿ ಸಂಸ್ಥೆಯ ನಿರ್ದೇಶಕ ಕೆ.ಎನ್. ವಾದಿರಾಜ್,
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆಂಪಯ್ಯ, ಕಾರ್ಯಕ್ರಮದಲ್ಲಿ ವಿವಿಧ ಕಂಪನಿಗಳ ಉದ್ಯೋಗದಾತರು, ವಿವಿಧ ಅಧಿಕಾರಿಗಳು ಹಾಜರಿದ್ದರು. ಕೌಶಲ್ಯಾಭಿವೃದ್ಧಿ ಇಲಾಖೆಯ ಅಂಜನ್ ಮೂರ್ತಿ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles